ಹೂವಿನಹಡಗಲಿ ತಹಸಿಲ್ ಕಚೇರಿಯಲ್ಲಿ ಪೋಕ್ಸೋ ಕಾಯ್ದೆ ಅನುಷ್ಠಾನ ಮತ್ತು ತಾಲೂಕು ಕೆಪಿಎಂಇ ಪ್ರಾಧಿಕಾರ ಸ್ಥಾಪನೆ ಸಭೆಯಲ್ಲಿ ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿದರು. ತಾಪಂ ಇಒ ಪರಮೇಶ್ವರ, ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ, ಸಿಡಿಪಿಒ ರಾಮನಗೌಡ, ಎಪಿಎಂಸಿ ಕಾರ್ಯದರ್ಶಿ ತಿಮ್ಮಪ್ಪನಾಯಕ, ತಾಲೂಕು ದೈಹಿಕ ಅಧೀಕ್ಷಕ ರಫಿಕ್ ಅಹಮ್ಮದ್ ಇತರರಿದ್ದರು.
- ತಹಸೀಲ್ದಾರ್
- ಸಂತೋಷ್‌ಕುಮಾರ್
- ಸೂಚನೆ
ಹೂವಿನಹಡಗಲಿ: ತಾಲೂಕಿನಲ್ಲಿ ಎರಡು ವರ್ಷಗಳಿಂದ ಸುಮಾರು 25 ಬಾಲಗರ್ಭಿಣಿಯರು ಪತ್ತ್ತೆಯಾಗಿದ್ದು, ಗ್ರಾಮೀಣ ಭಾಗದ ವೈದ್ಯರು ಈ ಕುರಿತು ಪ್ರಕರಣ ದಾಖಲಿಸಿಬೇಕು ಎಂದು ತಹಸೀಲ್ದಾರ್ ಸಂತೋಷ್ ಕುಮಾರ್ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪೋಕ್ಸೋ ಕಾಯ್ದೆ ಅನುಷ್ಠಾನ ಮತ್ತು ತಾಲೂಕು ಕೆ.ಪಿ.ಎಂ.ಇ ಪ್ರಾಧಿಕಾರ ಸ್ಥಾಪನೆ ಸಭೆಯಲ್ಲಿ ಮಾತನಾಡಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ತಾಯಿ ಕಾರ್ಡ್ ಪಡೆಯುವ ಸಂದರ್ಭದಲ್ಲಿಯೇ ಬಾಲಗರ್ಭಿಣಿಯರ ಪ್ರಕರಣಗಳು ಪತ್ತೆಯಾಗಿದ್ದು ತಡವಾಗಿ ಬೆಳಕಿಗೆ ಬರುತ್ತಿವೆ.
ಆ ಸಂದರ್ಭದಲ್ಲಿ ಸ್ಥಳೀಯ ವೈದ್ಯರೇ ದೂರು ನೀಡುವ ಮೂಲಕ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಶಾಲಾ ಹಂತದಲ್ಲಿ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಗ್ರಾಮೀಣ ಭಾಗದಲ್ಲಿ ಕಾವಲುಪಡೆ ಸ್ಥಾಪಿಸಿ ಬಾಲ್ಯವಿವಾಹ ಹಾಗೂ ಬಾಲಗರ್ಭಿಣಿ ಪ್ರಕರಣಗಳನ್ನು ಪತ್ತೆ ಹಚ್ಚಬೇಕು ಎಂದರು.
ಡಿಸೆಂಬರ್‌ನಲ್ಲಿ ಪಲ್ಸ್ ಪೋಲಿಯೋ ಅಭಿಯಾನ ಆರಂಭವಾಗುತ್ತಿದ್ದು, ಆರೋಗ್ಯ ಇಲಾಖೆ ಹಾಗೂ ಸರ್ಕಾರ ಸೂಚಿತ ಇತರ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ತಾಲೂಕಿನ ವಿವಿಧ ಭಾಗಗಳಲ್ಲಿ ಅನಧಿಕೃತ ವೈದ್ಯರು ಹಾಗೂ ರಕ್ತತಪಾಸಣೆ ಕೇಂದ್ರಗಳು ಆರಂಭವಾಗಿದ್ದು, ಅವುಗಳ ಮೇಲೆ ದಾಳಿ ನಡೆಸಿ ಸೂಕ್ತ ಕ್ರಮ ವಹಿಸಬೇಕು ಎಂದು ತಹಸೀಲ್ದಾರ್ ತಿಳಿಸಿದರು.