ಕುರುಗೋಡು ತಾಲೂಕಿನ ಗೋಪಾಲಪುರಂ ಗ್ರಾಮದ ರೈತ ನವೀನ್ ಕುಮಾರ್ ಜಮೀನಿಗೆ ತೋಟಗಾರಿಕೆ ಇಲಾಖೆ ಎಎಚ್‌ಒ ಕಿರಣ್ ಚೌರಾದ್ ಭೇಟಿ ನೀಡಿ ಮಾಹಿತಿ ನೀಡಿದರು.
ಕುರುಗೋಡು: ಮಳೆ ಕೊರತೆ ಹಿನ್ನೆಲೆಯಲ್ಲಿ ರೈತರು ಇಲಾಖೆಯ ತಾಂತ್ರಿಕ ಸಲಹೆ ಪಡೆದು ಕಡಿಮೆ ನೀರಿನಲ್ಲಿ ಬೆಳೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಬಹುದು ಎಂದು ತೋಟಗಾರಿಕೆ ಇಲಾಖೆ ಎಎಚ್‌ಒ ಕಿರಣ್ ಚೌರಾದ್ ತಿಳಿಸಿದರು.
ಕೋಳೂರು ಹೋಬಳಿಯ ಗೋಪಾಲಪುರಂ ಗ್ರಾಮದಲ್ಲಿ ರೈತರ ಜಮೀನಿನಲ್ಲಿ ಬೆಳೆ ಪರಿಶೀಲಿಸಿ ಮಾತನಾಡಿದರು. ಮಳೆ ಅಭಾವ, ತೀವ್ರ ನೀರಿನ ಕೊರತೆ ಹಾಗೂ ಜಿಲ್ಲೆಯಲ್ಲಿ ಎಲ್ ನಿನೊ ಪರಿಣಾಮದಿಂದ ಉಂಟಾಗಬಹುದಾದ ಬರಗಾಲ ಪರಿಸ್ಥಿತಿ ಎದುರಿಸಲು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಇಲಾಖೆಯಿಂದ ವಿಶೇಷ ಕ್ಷೇತ್ರ ಭೇಟಿ ಹಮ್ಮಿಕೊಳ್ಳಲಾಗುತ್ತಿದೆ. ರೈತರು ಲಭ್ಯವಿರುವ ಅಲ್ಪ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅದಕ್ಕಾಗಿ ಹನಿ ನೀರಾವರಿ, ಹೊದಿಕೆ ಪದ್ಧತಿ ಅಳವಡಿಕೊಳ್ಳಬೇಕು. ತೇವಾಂಶ ಆವಿಯಾಗದಂತೆ ತಡೆಯಲು ಗಿಡದ ಬುಡಕ್ಕೆ ಒಣ ಕಸದ ಹೊದಿಕೆ ಅಳವಡಿಸುವುದರಿಂದ ಶೇ.40 ನೀರನ್ನು ಉಳಿಸಬಹುದು. ಗಿಡ ಒಣಗದಂತೆ ಲಘು ಪೋಷಕಾಂಶ ಹಾಗೂ ರಕ್ಷಣಾತ್ಮಕ ಕ್ರಮ ವಹಿಸುವಂತೆ ಸೂಚಿಸಿದರು.