- ಬಗರ್ ಹುಕಂ ಸಾಗುವಳಿದಾರರಿಗಿಲ್ಲ ಪಹಣಿ
- ಯೂರಿಯಾಕ್ಕಾಗಿ ರೈತರ ಪರದಾಟ
ಬಳ್ಳಾರಿ : ರಾಜ್ಯ ಸರ್ಕಾರ ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ಹಾಗೂ ನೈಜ ರೈತರಿಗೆ ಸಕಾಲದಲ್ಲಿ ಯೂರಿಯಾ ಸಿಗುವ ಉದ್ದೇಶದಿಂದ ಕಡ್ಡಾಯವಾಗಿ ಎಫ್‌ಐಡಿ ಜಾರಿಗೊಳಿಸಿದೆ. ಯೂರಿಯಾಕ್ಕಾಗಿ ಬಗರ್ ಹುಕಂ ಸಾಗುವಳಿದಾರರಿಗೆ ಸಂಕಷ್ಟ ಎದುರಾಗಿದೆ.
ಜಿಲ್ಲೆಯ ಐದು ತಾಲೂಕಿನಲ್ಲಿ ಕಳೆದ ಕೆಲ ದಶಕಗಳಿಂದ ಸಾವಿರಾರು ಎಕರೆ ಸರ್ಕಾರಿ ಭೂಮಿಯಲ್ಲಿ ರೈತರು ಸಾಗುವಳಿ ಮಾಡುತ್ತಿದ್ದಾರೆ. ಜಮೀನಿನ ಅಕ್ರಮ ಮತ್ತು ಸಕ್ರಮ ಸಂಬಂಧ ಬಳ್ಳಾರಿ 4,541, ಸಿರಗುಪ್ಪ 4,157, ಸಂಡೂರು 13,825, ಕುರುಗೋಡು 2,201 ಕಂಪ್ಲಿ 2,259 ಸೇರಿದಂತೆ ಒಟ್ಟಾರೆ 26,983 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ ತಾಂತ್ರಿಕ ಕಾರಣಗಳು, ಅರಣ್ಯ ಭೂಮಿ ಒತ್ತುವರಿ, ಜಿಪಿಎಸ್ ದೋಷ ಹಾಗೂ ಸೂಕ್ತ ದಾಖಲೆಗಳ ಕೊರತೆಯಿಂದಾಗಿ ಬರೋಬ್ಬರಿ 22,364 ಅರ್ಜಿಗಳು (ಸುಮಾರು ಶೇ. 80ರಷ್ಟು) ಆರಂಭಿಕ ಹಂತದಲ್ಲೇ ತಿರಸ್ಕೃತಗೊಂಡಿವೆ.
ಕೇವಲ 453 ಅರ್ಜಿಗಳು ಮಾತ್ರ ಬಗರ್ ಹುಕಂ ಸಮಿತಿಯ ಮುಂದೆ ಮಂಡಿಸಲು ಅರ್ಹತೆ ಪಡೆದಿದ್ದು, ಪರಿಶೀಲನಾ ಪ್ರಕ್ರಿಯೆಯಲ್ಲಿವೆ. ಇನ್ನೂ 4,166 ಅರ್ಜಿಗಳು ಅನುಮೋದಿತ ಹಾಗೂ ತಿರಸ್ಕೃತ ಹಂತದಲ್ಲಿವೆ. ಜಿಲ್ಲೆಯಲ್ಲಿ ಬಗರ್ ಹುಕಂ ವ್ಯಾಪ್ತಿಯಡಿ ಸಾಗುವಳಿಯಲ್ಲಿರುವ ಮತ್ತು ಒತ್ತುವರಿಯಾಗಿರುವ ಅಂಶದ ಪ್ರಕಾರ ಅಂದಾಜು 26,220 ಎಕರೆ ಸರ್ಕಾರಿ ಜಮೀನು ಬಗರ್ ಹುಕಂ ಹಾಗೂ ಇತರೆ ಅನಧಿಕೃತ ಸಾಗುವಳಿ ವ್ಯಾಪ್ತಿಯಲ್ಲಿದೆ ಎನ್ನಲಾಗಿದೆ. (ಸಾಮಾನ್ಯವಾಗಿ ಒಬ್ಬ ರೈತ ಗರಿಷ್ಠ 4 ಎಕರೆವರೆಗೆ ಸಕ್ರಮಕ್ಕೆ ಕೋರಲು ಅವಕಾಶವಿದೆ).
ಅರಣ್ಯ ಕಾಯ್ದೆ ಉಲ್ಲಂಘನೆ : ಜಿಲ್ಲೆಯ ಸಂಡೂರಿನಲ್ಲಿಯೇ ಅತ್ಯಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಸಂಡೂರಿನ ಗಣಿ ಪ್ರದೇಶ ಹಾಗೂ ಅರಣ್ಯ ವಲಯದ ಗಡಿಭಾಗದ ಜಮೀನುಗಳಾಗಿರುವುದರಿಂದ, ಹೆಚ್ಚಿನ ಅರ್ಜಿಗಳು ಅರಣ್ಯ ಕಾಯ್ದೆಯ ಉಲ್ಲಂಘನೆಯಡಿ ಸಿಲುಕಿ ವಿಲೇವಾರಿಯಾಗದೆ ಬಾಕಿ ಉಳಿದಿವೆ. ಮೋಕಾ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ನೂರಾರು ಎಕರೆ ಜಮೀನು ಬಗರ್ ಹುಕಂ ಅಡಿಯಲ್ಲಿದೆ. ಆದರೆ, ಬಹುತೇಕ ಅರ್ಜಿಗಳು ತಾಂತ್ರಿಕ ಕಾರಣಗಳಿಂದ ತಿರಸ್ಕೃತಗೊಂಡಿರುವುದರಿಂದ ರೈತರು ಇನ್ನೂ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. ಸಿರಗುಪ್ಪ, ಕುರುಗೋಡು ಮತ್ತು ಕಂಪ್ಲಿ ಭಾಗದಲ್ಲಿ ತುಂಗಭದ್ರಾ ನದಿ ಪಾತ್ರ ಹಾಗೂ ಕಾಲುವೆ ಅಚ್ಚುಕಟ್ಟು ಪ್ರದೇಶದ ಸರ್ಕಾರಿ ಕಂದಾಯ ಭೂಮಿಯಲ್ಲಿ ಭತ್ತ ಹಾಗೂ ಇತರ ಬೆಳೆ ಬೆಳೆಯುತ್ತಿರುವ ಸಾಗುವಳಿದಾರರು ಹೆಚ್ಚಾಗಿದ್ದಾರೆ.
ಯೂರಿಯಾಕ್ಕೆ ಪರದಾಟ : ಜಿಲ್ಲಾದ್ಯಂತ ಕಳೆದ ಕೆಲ ದಿನಗಳಿಂದ ಪೂರ್ವ ಮುಂಗಾರು ಮಳೆ ಸುರಿದಿದ್ದು, ಕೃಷಿ ಚಟುವಟಿಕೆ ಆರಂಭಿಸಲು ರೈತರು ಉತ್ಸುಕರಾಗಿದ್ದಾರೆ. ಈಗಾಗಲೇ, ಕೆಲ ರೈತರು ಮಣ್ಣಿನ ಫಲವತತ್ತೆ ಆಧಾರದ ಮೇಲೆ ನಾನಾ ಬೆಳೆಗಳು ಬೆಳೆಯಲು ಬೀಜ ಖರೀದಿಸಿದ್ದಾರೆ. ಆದರೆ, ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಯೂರಿಯಾಕ್ಕೆ ಎಫ್‌ಐಡಿ ನೋಂದಣಿ ಇರುವುದರಿಂದ ಬಗರ್ ಹುಕಂ ಸಾಗುವಳಿದಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಕಳೆದ ವರ್ಷಗಳಿಂದ ಜಮೀನನ್ನು ಸ್ವಾಧೀನದಲ್ಲಿ ಇಟ್ಟುಕೊಂಡು ಕೃಷಿ ಮಾಡಿದರೂ ಈವರೆಗೂ ಹಕ್ಕುಪತ್ರವಿಲ್ಲ. ಭೂಮಿಗೆ ಪಹಣಿ ದೊರೆಯದೆ ಇರದೇ ಇರುವುದರಿಂದ ಬ್ಯಾಂಕ್‌ಗಳಲ್ಲಿ ಸಾಲ ದೊರೆಯುವುದಿಲ್ಲ. ಇನ್ನೂ ಹೊರಗಡೆ ಕೈಸಾಲ ಪಡೆಯಲು ಜಮೀನಿನ ದಾಖಲೆಗಳು ಹೆಸರಿನಲ್ಲಿ ಇಲ್ಲದೆ ಇರುವುದು ದೊಡ್ಡ ಸಮಸ್ಯೆಯಾಗಿದೆ. ಇತ್ತೀಚಿಗೆ ಸರ್ಕಾರದ ಕಟ್ಟುನಿಟ್ಟಿನ ನಿಯಮದಿಂದ ಮಳಿಗೆಗಳಲ್ಲಿ ರಸಗೊಬ್ಬರಕ್ಕೆ ಮುಂಗಡವಾಗಿ ಹಣ ಕೊಟ್ಟರೆ ಮಾತ್ರ ನೀಡುತ್ತಿದ್ದಾರೆ. ಬಗರ್ ಹುಕಂ ಸಾಗುವಳಿದಾರರು ಕಾಳ ಸಂತೆಯಲ್ಲಿ ದುಬಾರಿ ಬೆಲೆಗೆ ಯೂರಿಯಾ ಕೊಂಡುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಕೂಡಲೇ ಬಗರ್ ಹುಕಂ ಸಾಗುವಳಿದಾರರಿಗೆ ಹಣ ಪಹಣಿ ನೀಡಲಿ ಅಥವಾ ಯೂರಿಯಾ ವಿತರಿಸಲು ಮುಂದಾಗಬೇಕು ಎಂಬುದು ರೈತರ ಆಗ್ರಹವಾಗಿದೆ.
"
.. ಕೆಲವೊಂದು ತಾಂತ್ರಿಕ ದೋಷದಿಂದ ಅರ್ಜಿಗಳು ತಿರಸ್ಕ್ರತಗೊಂಡಿವೆ. ಬಗರ್ ಹುಕಂ ಸಾಗುವಳಿದಾರರಿಗೆ ಯೂರಿಯಾ ವಿತರಣೆಗೆ ಕ್ರಮವಹಿಸಲಾಗುವುದು.- ನಾಗೇಂದ್ರ ಪ್ರಸಾದ್, ಕೆ. ಡಿಸಿ, ಬಳ್ಳಾರಿ.