ಬಳ್ಳಾರಿ : ನಗರದ ಅಧಿದೇವತೆ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಸಂಜೆ ಸಿಡಿಬಂಡಿ ರಥೋತ್ಸವವು ಸಾವಿರಾರು ಭಕ್ತರ ಜಯಘೋಷದ ನಡುವೆ ವಿಜೃಂಭಣೆಯಿಂದ ನಡೆಯಿತು.
ಸಿಡಿಬಂಡಿ ರಥೋತ್ಸವ ನಿಮಿತ್ತ ಕನಕದುರ್ಗಮ್ಮ ದೇವಿಯ ಮೂರ್ತಿಯನ್ನು ಚಿನ್ನಾಭರಣಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನದ ಪ್ರವೇಶದ್ವಾರ, ಗರ್ಭಗುಡಿ ಹಾಗೂ ಗೋಪುರಗಳನ್ನು ವಿವಿಧ ಹೂವು, ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ನಗರದ ಕೌಲಬಜಾರ್ ಪ್ರದೇಶದ ದುಗ್ಗಿ ಮಾಧವಯ್ಯ ಬೀದಿಯಿಂದ ಗಾಣಿಗ ಸಮುದಾಯದವರು, ಸಿಡಿ ಬಂಡಿಯನ್ನು ಸಿಂಗರಿಸಿಕೊಂಡು, ಪೂಜೆ ಸಲ್ಲಿಸಿ, ಮೆರವಣಿಗೆ, ತಾಳ ವಾದ್ಯಗಳ ಮೂಲಕ ಸೋಮವಾರ ಸಂಜೆ ದೇವಸ್ಥಾನದ ಆವರಣದಲ್ಲಿ ತಂದು ನಿಲ್ಲಿಸಿದರು. ಮಂಗಳವಾರ ಬೆಳಗ್ಗೆ ಮೊದಲಿಗೆ ಸಣ್ಣ ದುರ್ಗಮ್ಮನ ಗುಡಿಯಿಂದ ಕನಕ ದುರ್ಗಮ್ಮ ದೇವಸ್ಥಾನವರೆಗೆ ಮೇಟಿ ಕುಂಭ ಪೂಜೆ ನಡೆಯಿತು. ಮಧ್ಯಾಹ್ನ ಗಾಣಿಗ ಸಮುದಾಯವು ದೇವಿಗೆ ನೈವೇದ್ಯ ಅರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.
ನಗರವೂ ಸೇರಿದಂತೆ ಜಿಲ್ಲೆಯ ಹಾಗೂ ಆಂಧ್ರ, ತೆಲಂಗಾಣ, ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಶ್ರದ್ಧಾಭಕ್ತಿಯಿಂದ ಉತ್ಸವಕ್ಕೆ ಸಾಕ್ಷಿಯಾದರು. ನೂಕುನುಗ್ಗಲು ಹಾಗೂ ಹರ್ಷೋದ್ಗಾರಗಳ ನಡುವೆಯೇ ದೇವಿಯ ದರ್ಶನ ಪಡೆದರು.
ಪಾರ್ವತಿನಗರ, ಗಾಂಧಿನಗರ, ಕಪ್ಪಗಲ್ಲು ರಸ್ತೆ, ರೈಲು ಕೆಳಸೇತುವೆ, ಎಸ್ಪಿ ಕಚೇರಿ ಮುಂಭಾಗವೂ ಸೇರಿದಂತೆ ದೇವಾಲಯದ ಸುತ್ತಮುತ್ತಲಿನ ರಸ್ತೆಗಳು ಹೆಜ್ಜೆ ಇಡಲು ಜಾಗವಿರದಷ್ಟು ಭಕ್ತರಿಂದ ಕಿಕ್ಕಿರಿದಿದ್ದವು. ಕಟ್ಟಡಗಳು, ಮರಗಳ ಮೇಲೂ ನಿಂತು ಭಕ್ತರು ಸಿಡಿಬಂಡಿಗೆ ಭಕ್ತಿಯಿಂದ ಕೈಮುಗಿದರು.
ಬೆಳಗ್ಗೆಯಿಂದಲೇ ನಗರದ ಎಲ್ಲ ರಸ್ತೆಗಳಲ್ಲೂ ದುರ್ಗಮ್ಮನ ಭಕ್ತರು ದೊಡ್ಡ ಹೂ ಮಾಲೆ, ಮಂಗಳ ವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ಸಾಗಿಬಂದಿದ್ದು ವಿಶೇಷವಾಗಿತ್ತು. ಮುಸ್ಸಂಜೆಯ ವೇಳೆಗೆ ಸಿಡಿಬಂಡಿ ಚಲಿಸಲು ಆರಂಭಿಸುತ್ತಿದ್ದಂತೆ, ದುರ್ಗಮ್ಮನಿಗೆ ಜೈ ಎಂಬ ಘೋಷಣೆ ಎಲ್ಲೆಡೆ ಕೇಳಿಬಂತು. ಬಂಡಿಯನ್ನು ಎಳೆದ ಮೂರು ಜೊತೆ ಕೀಲಾರಿ ಎತ್ತುಗಳ ಸಾರಥ್ಯವನ್ನು ಗಾಣಿಗ ಸಮುದಾಯವರು ವಹಿಸಿದ್ದರು. ಬಂಡಿ ಚಲಿಸುವುದಕ್ಕೂ ಮುನ್ನ ಹರಕೆ ತೀರಿಸಿದ ಭಕ್ತರು ಮೇಲಕ್ಕೆ ಜೀವಂತವಾದ ಕೋಳಿಗಳನ್ನು ಎಸೆದು ಹರಕೆ ತೀರಿಸಿದರು. ಕೋಳಿಗಳನ್ನು ಹಿಡಿಯಲು ಯುವಕರ ದಂಡು ಕೈಚಾಚಿ ಸಾಹಸ ಪ್ರದರ್ಶಿಸಿದ್ದೂ ಗಮನ ಸೆಳೆಯಿತು.
ನಂತರ ದೇವಸ್ಥಾನವನ್ನು ಸಿಡಿಬಂಡಿ ಮೂರು ಸುತ್ತು ಹಾಕಿತು. ಪ್ರತಿ ಸುತ್ತಿನಲ್ಲೂ ಭಕ್ತರ ಘೋಷಣೆ ಮುಗಿಲು ಮುಟ್ಟಿತ್ತು. ನೈಸರ್ಗಿಕ ವಿಕೋಪ, ಸಾಂಕ್ರಾಮಿಕ ಕಾಯಿಲೆಯಂಥ ದುರ್ಘಟನೆಗಳು ನಡೆಯದಂತೆ ಕಾಪಾಡು ತಾಯಿ ಎಂದು ದುರ್ಗಮ್ಮನಿಗೆ ಕೈಮುಗಿದರು.
ದೇವಸ್ಥಾನದ ಆವರಣದಲ್ಲಿ ಬೆಳಗ್ಗೆಯಿಂದಲೇ ಜಾತ್ರೆಯ ರಂಗು ಕಳೆಕಟ್ಟಿತ್ತು. ಮಹಿಳೆಯರು, ಮಕ್ಕಳು ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು, ಹಣ್ಣು -ಕಾಯಿ ಅರ್ಪಿಸಿ, ದೇವಿಯ ದರ್ಶನ ಪಡೆದರು. ಭಕ್ತರಿಗೆಂದೇ ಸಿಹಿಯೂಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಸಂಜೆಯಾದರೂ ಚುರುಗುಟ್ಟುವ ಬಿಸಿಲಿದ್ದರೂ ರಥೋತ್ಸವವನ್ನು ಕಣ್ಣಾರೆ ತುಂಬಿಕೊಳ್ಳುವ ಆಸೆಯಿದ್ದ ಭಕ್ತರು ಬಿಡಾರ ಹೂಡಿದ್ದರು. ಉತ್ಸವದ ಪ್ರಯುಕ್ತ ದೇವಾಲಯದ ಸುತ್ತಮುತ್ತ ಭಕ್ತರು ಅರವಟ್ಟಿಗೆಗಳನ್ನು ಸ್ಥಾಪಿಸಿದ್ದರು. ಭದ್ರತಾ ವ್ಯವಸ್ಥೆ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ನಗರದ ವಿವಿಧ ರಸ್ತೆಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು.
ನಗರದ ರಾಯಲ್ ವೃತ್ತ, ಎಸ್ಪಿ ಸರ್ಕಲ್, ಬಿಡಿಎಎ ಫುಟ್ಬಾಲ್ ಮೈದಾನ ಎದುರು ಸೇರಿದಂತೆ ವಿವಿಧಡೆ ಗ್ರಾಮೀಣ ಭಾಗದಿಂದ ಬರುವ ಸಾವಿರಾರು ಭಕ್ತರಿಗೆ ರಸ್ತೆಯುದ್ಧಕ್ಕೂ ಮಜ್ಜಿಗೆ, ಪಾನಕ, ಕುಡಿವ ನೀರಿನ ವ್ಯವಸ್ಥೆ ಸೇರಿ ವಿವಿಧ ಸೇವೆಗಳನ್ನು ಕಲ್ಪಿಸಲಾಗಿತ್ತು. ಸಿಡಿಬಂಡಿ ಹಾಗೂ ಜಾತ್ರಾ ಮಹೋತ್ಸವ ಹಿನ್ನೆಲೆ ನಗರದ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು, ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿಸಿ, ವಿತರಿಸಿದರು. ಉತ್ಸವದ ನಿಮಿತ್ತ ನಗರದಲ್ಲಿ ಸಂಚಾರ ಬದಲಾವಣೆ ಮಾಡಲಾಗಿತ್ತು.