ಸಹಕಾರಿ ಬ್ಯಾಂಕ್‌ನಲ್ಲಿ 7.55 ಕೋಟಿ ರೂ. ವಂಚನೆ 
ಬಳ್ಳಾರಿ

ಸಹಕಾರಿ ಬ್ಯಾಂಕ್‌ನಲ್ಲಿ 7.55 ಕೋಟಿ ರೂ. ವಂಚನೆ

ಪ್ರಮುಖ ಮುಖ್ಯಾಂಶಗಳು

  • ವಂಚನೆ
ಬಳ್ಳಾರಿ : ನಗರದ ಮಾನವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್‌ನ ಶಾಖೆಯಲ್ಲಿ ಜ್ಯೂನಿಯರ್ ಅಸಿಸ್ಟೆಂಟ್ ವಿರುದ್ಧ 7.5 ಕೋಟಿ ರೂ. ಹಣ ವಂಚಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.
2025ರ ಫೆಬ್ರವರಿ ತಿಂಗಳಲ್ಲಿ ನಗರದಲ್ಲಿ ಶಾಖೆ ಆರಂಭಿಸಲಾಗಿದೆ. ಈ ಶಾಖೆಯಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಎಂ. ರಮೇಶ ಎಂಬಾತನೇ ವಂಚನೆಯ ಮಾಸ್ಟರ್‌ಮೈಂಡ್ ಎಂಬುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಏನಿದು ಘಟನೆ : ಸಾಲಕ್ಕಾಗಿ ನಕಲಿ ಅರ್ಜಿಗೆ ಸಹಿ ಮಾಡಿ ಕೋಮಲ್ ಪರಶುರಾಂಪುರಿಯಾ ಎಂಬ ಹೆಸರಿನಲ್ಲಿ 1,86,64,202 ರೂ., ಶ್ರೀಕಾಂತ್ ಪರಶುರಾಂಪುರಿಯಾ ಹೆಸರಿನಲ್ಲಿ 2,02,84,100 ರೂ., ವಿಶಾಲ್ ಪರಶುರಾಂಪುರಿಯಾ ಹೆಸರಿನಲ್ಲಿ 1,43,79,830 ರೂ. ಬಾಬು ಲಾಲ್ ಪರಶುರಾಂಪುರಿಯಾ ಹೆಸರಿನಲ್ಲಿ 2,00,15,476 ರೂ. ನಕಲಿ ದಾಖಲೆ ಸೃಷ್ಟಿಸಿ ಒಡಿ ಲೋನ್ ಮಂಜೂರು ಮಾಡಿದ್ದಾನೆ. ಜತೆಗೆ ರಾಧಾಕೃಷ್ಣ ಸೌಹಾರ್ದ ಪತ್ತಿನ ಸಹಕಾರಿ ಸಂಘದಲ್ಲಿನ 16 ಲಕ್ಷ ರೂ. ಮತ್ತು ಶ್ಯಾಮಲಾ ಬಾಯಿ ಅವರ ಖಾತೆಯಲ್ಲಿದ್ದ 6 ಆರು ಲಕ್ಷ ರೂ. ಫಿಕ್ಸೆಡ್ ಡೆಪಾಸಿಟ್ (ಎಫ್‌ಡಿ) ಹಣವನ್ನು ಅವರ ಗಮನಕ್ಕೆ ಬಾರದಂತೆ ಎಫ್‌ಡಿ ಲೋನ್ ಮೂಲಕ ಹಣ ಪಡೆದಿದ್ದಾನೆ. ಒಟ್ಟಾರೆ ಆರು ಜನರ ನಕಲಿ ದಾಖಲೆ ಬಳಸಿ ಒಡಿ ಹಾಗೂ ಎಫ್‌ಡಿ ಲೋನ್ ಪಡೆಯುವ ಹೆಸರಿನಲ್ಲಿ 7,55,20,255 ರೂ. ಹಣ ವಂಚಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಾನು ಪಡೆದ ಸಾಲದ ಹಣವನ್ನು ನೇರವಾಗಿ ತನ್ನ ಪತ್ನಿ ರಂಜಿತ, ತಂದೆ, ತಾಯಿ ಹಾಗೂ ಇತರರ ಹೆಸರಿನಲ್ಲಿರುವ ಖಾಸಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾನೆ. ತನ್ನ ಕುಟುಂಬಸ್ಥರ ಹೆಸರಿನಲ್ಲಿ ತೆರೆಯಲಾಗಿದ್ದ ಖಾತೆಗಳಿಗೆ ರಮೇಶ ತನ್ನದೇ ಮೊಬೈಲ್ ಸಂಖ್ಯೆ ಲಿಂಕ್ ಮಾಡಿದ್ದು, ಮೊಬೈಲ್ ಬ್ಯಾಂಕಿಂಗ್ ಮೂಲಕ ಹಣವನ್ನು ಬೇರೆ ಬೇರೆ ಖಾತೆಗಳಿಗೆ ಸುಲಭವಾಗಿ ವರ್ಗಾಯಿಸಿಕೊಂಡಿರುವುದು ಪತ್ತೆಯಾಗಿದೆ. ಬ್ಯಾಂಕ್‌ನಲ್ಲಿ ನಡೆದ ಆರ್ಥಿಕ ಅವ್ಯವಹಾರವನ್ನು ಗಮನಿಸಿದ ಸಹಕಾರ ನಿಗಮದ ವ್ಯವಸ್ಥಾಪಕ ನಿರ್ದೇಶಕ ಗೋಪಾಲ ಕೃಷ್ಣ ವಂಚನೆ ಬಗ್ಗೆ ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಆರೋಪಿ ರಮೇಶ್, ತಂದೆ ಎಂ.ಕೃಷ್ಣ, ತಾಯಿ ಜ್ಯೋತಿ, ಪತ್ನಿ ರಂಜಿತ ಹಾಗೂ ಇತರರು ಸೇರಿ ಒಟ್ಟು ಐವರ ವಿರುದ್ಧ ಬ್ಯಾಂಕ್ ನಿರ್ದೇಶಕ ಗೋಪಾಲ ಕೃಷ್ಣ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.