ಬೈಕ್‌ಗೆ ಲಾರಿ ಡಿಕ್ಕಿ, ತಂದೆ- ಮಗ ಸಾವು 
ಬಳ್ಳಾರಿ

ಬೈಕ್‌ಗೆ ಲಾರಿ ಡಿಕ್ಕಿ, ತಂದೆ- ಮಗ ಸಾವು

ಪ್ರಮುಖ ಮುಖ್ಯಾಂಶಗಳು

  • ಲಾರಿಯೊಂದು ಬೈಕ್‌ಗೆ ಬಲವಾಗಿ ಡಿಕ್ಕಿ
  • ಪ್ಯಾರಾಮೆಡಿಕಲ್ ಓದುತ್ತಿದ್ದ ಮಗ
ಬಳ್ಳಾರಿ : ಅತಿವೇಗವಾಗಿ ಬಂದ ಮೈನಿಂಗ್ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ತಂದೆ ಮತ್ತು ಮಗ ಇಬ್ಬರೂ ಮೃತಪಟ್ಟ ಘಟನೆ ಸಂಡೂರು ತಾಲೂಕಿನ ಚಿನ್ನಿಬಸಪ್ಪ ಕ್ಯಾಂಪ್‌ನ ಕುಮಾರ ಸ್ವಾಮಿ ದೇವಸ್ತಾನ ರಸ್ತೆ ಬಳಿ ಗುರುವಾರ ನಡೆದಿದೆ.
ಚಿನ್ನಿಬಸಪ್ಪ ಕ್ಯಾಂಪ್ ನಿವಾಸಿಗಳಾದ ಬೆಳ್ಳಿ ನಾಗರಾಜ ( 45 ), ದುರುಗೇಶ ( 22) ಮೃತರು. ಮೈನಿಂಗ್ ಕಂಪನಿಯೊಂದರಲ್ಲಿ ಕಾವಲುಗಾರರಾಗಿ ಬೆಳ್ಳಿ ನಾಗರಾಜ ಕೆಲಸ ಮಾಡುತ್ತಿದ್ದರು. ಪ್ಯಾರಾಮೆಡಿಕಲ್ ಓದುತ್ತಿದ್ದ ಮಗ ದುರುಗೇಶ, ತಂದೆ ಬೆಳ್ಳಿ ನಾಗರಾಜ ಅವರನ್ನು ಎಂದಿನಂತೆ ಮೈನಿಂಗ್ ಕಂಪನಿಯ ಕೆಲಸಕ್ಕೆ ಬಿಟ್ಟು ಬರಲು ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು.
ಎದುರುಗಡೆಯಿಂದ ಅತಿವೇಗವಾಗಿ ಬಂದ ಮೈನಿಂಗ್ ಲಾರಿಯೊಂದು ಬೈಕ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ತಂದೆ ಬೆಳ್ಳಿ ನಾಗರಾಜ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ತೀವ್ರವಾಗಿ ಗಾಯಗೊಂಡಿದ್ದ ಮಗ ದುರುಗೇಶನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
==