ಬಳ್ಳಾರಿ : ತಾಲೂಕಿನ ಕುಡುತಿನಿ ಬಳಿ ಕೈಗಾರಿಕೆಗಾಗಿ ನೀಡಿದ ಭೂಮಿಗೆ ನ್ಯಾಯಯುತ ಬೆಲೆಗಾಗಿ ಆಗ್ರಹಿಸಿ ಧರಣಿ ಹಮ್ಮಿಕೊಂಡು ಸಾವಿರ ದಿನ ಪೂರೈಸಿದರೂ ಸರ್ಕಾರದಿಂದ ಸ್ಪಂದನೆಯಿಲ್ಲ. ಆದ್ದರಿಂದ, ಮೇ. 02ರಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಸಂಘಟನೆ ರಾಜ್ಯ ಉಪಾಧ್ಯಕ್ಷ ಜೆ.ಸತ್ಯಬಾಬು ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆಲ ವರ್ಷಗಳ ಹಿಂದಯೇ ಕೆಐಎಡಿಬಿಯೂ ಕೈಗಾರಿಕೆ ಉದ್ದೇಶಕ್ಕಾಗಿ ಕಡಿಮೆ ಬೆಲೆಗೆ ಸಾವಿರಾರು ಎಕರೆ ಕೃಷಿ ಭೂಮಿ ಸ್ವಾಧೀನಪಡಿಸಿಕೊಂಡಿಸಿತು. ಆದರೆ, ಈವರೆಗೆ ಒಂದು ಕೈಗಾರಿಕೆ ಸ್ಥಾಪನೆ ಮಾಡಲು ಮುಂದಾಗಿಲ್ಲ. ಅಲ್ಲದೆ, ಆರ್ಸೆಲ್ಲಾರ್ ಮಿತ್ತಲ್ ಕಂಪನಿಗೆ ನೀಡಿದ್ದ ಭೂಮಿಯನ್ನು ಜಿಂದಾಲ್‌ಗೆ ನೀಡಿದೆ. ನ್ಯಾಯಯುತ ಪರಿಹಾರ ನೀಡುವವರೆಗೆ ಜಿಂದಾಲ್ ಕಂಪನಿಯೂ ಕೈಗಾರಿಕೆ ಸ್ಥಾಪಿಸದಂತೆ ತಡೆಯಲು ಮುಂದಾದರೆ ಸರ್ಕಾರ ಪೊಲೀಸರ ಮೂಲಕ ರೈತ ಹೋರಾಟಗಾರರನ್ನು ಹತ್ತಿಕ್ಕಿಲು ಮುಂದಾಗಿದೆ.
ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಜಿಂದಾಲ್‌ನ ಕೈಗೊಂಬೆಯಾಗಿದ್ದಾರೆ. ಭೂ ಸಂತ್ರಸ್ತ ರೈತರು ಧರಣಿ ಹಮ್ಮಿಕೊಂಡು ಸಾವಿರ ದಿನ ಪೂರೈಸಿದರೂ ಸರ್ಕಾರದ ಕೈಗಾರಿಕಾ ಮಂತ್ರಿ ಹಾಗೂ ಯಾವ ಸಚಿವರು ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ. ಜತೆಗೆ ಜಿಲ್ಲೆಯ ಸಂಸದ ಹಾಗೂ ಶಾಸಕರಿಗೂ ಕೂಡ ಕಾಳಜಿಯಿಲ್ಲ. ಇತ್ತೀಚಿಗೆ ಸಂಡೂರು ಶಾಸಕರ ಕಚೇರಿಗೆ ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸಲೂ ಮುಂದಾದರೂ ಪೊಲೀಸರು ತಡೆದು ಬಂಧಿಸಿದ್ದಾರೆ. ಆದರೆ, ನ್ಯಾಯಾಲಯಕ್ಕೆ ಸುಳ್ಳು ಹೇಳಿಕೆ ಮೂಲಕ ಶಾಂತಿಯುತವಾಗಿ ಧರಣಿ ನಡೆಸುವ ಹೋರಾಟಗಾರರ ಮೇಲೆ ಇಂಜಕ್ಷನ್ ಆರ್ಡರ್ ತಂದಿದ್ದಾರೆ. ಇದರ ಜತೆ ಜೂ.7ರವರೆಗೆ 144 ಸೆಕ್ಸನ್ ಜಾರಿ ಮಾಡಲಾಗಿದೆ. ಅದಕ್ಕಾಗಿ ಸರ್ಕಾರಕ್ಕೆ ಪಾಠ ಕಲಿಸುವ ಉದ್ದೇಶದಿಂದ ಈ ಉಪವಾಸ ಸತ್ಯಾಗ್ರಹ ನಿರ್ಧಾರ ಮಾಡಲಾಗಿದೆ ಎಂದರು. ಸಂಘಟನೆ ಮುಖಂಡರಾದ ತಿಪ್ಪೇಸ್ವಾಮಿ, ವೀರೇಶ್, ಹನುಮೇಶ್ ಇತರರಿದ್ದರು.