ಇಟಗಿ ಗ್ರಾಮದ ಜನ-ಜಾನುವಾರುಗಳ ಕುಡಿವ ನೀರಿಗಾಗಿ ತುಂಗಭದ್ರಾ ನದಿಯಲ್ಲಿ ಜೆಸಿಬಿಯಿಂದ ಹರಿ ತೆಗೆಯುತ್ತಿರುವುದು. 
ಬಳ್ಳಾರಿ

ನೀರಿಗಾಗಿ ನದಿಯಲ್ಲಿ ಹರಿ ತೆಗೆದ ರೈತರು

ಪ್ರಮುಖ ಮುಖ್ಯಾಂಶಗಳು

  • ನಾಲ್ಕು ಲಕ್ಷ ರೂ. ವಂತಿಗೆಯಿಂದ ಕೆಲಸ
  • ಜೀವಜಲಕ್ಕಾಗಿ ಕ್ರಮ
ಕಂಪ್ಲಿ: ಕುಡಿವ ನೀರಿಗಾಗಿ ರೈತರು ನದಿಯಲ್ಲಿ ಆರು ಅಡಿ ಅಗಲದ ಹರಿ ತೆಗೆದು ಜಾಕ್‌ವೆಲ್, ಪಂಪ್‌ಹೌಸ್ ತನಕ ನೀರು ಹರಿಸಿಕೊಳ್ಳಲು ಮುಂದಾಗಿದ್ದಾರೆ.
ತುಂಗಭದ್ರಾ ನದಿಯಲ್ಲಿ ನೀರು ಬತ್ತಿರುವುದರಿಂದ ಜನ-ಜಾನುವಾರುಗಳಿಗೆ ತೀವ್ರ ತೊಂದರೆಯಾಗಿದೆ. ಇದರಿಂದಾಗಿ ಭಾನುವಾರ ನದಿಯಲ್ಲಿ ರೈತರು ಹರಿ ತೋಡಲು ಮುಂದಾದರು. ಇಟಗಿ ಗ್ರಾಮದ ಸಂಗಮೇಶ್ವರ ದೇವಸ್ಥಾನ ಹಿಂಭಾಗದಲ್ಲಿ ಶಂಕರಾಚಾರಿ ಮಡುವಿನಿಂದ ಒಂದೂವರೆ ಕಿ.ಮೀ. ಉದ್ದದ ಹರಿ ಅಗೆಯುತ್ತಿದ್ದಾರೆ.
3ರಿಂದ 4 ಅಡಿ ಆಳದ ಹರಿ ತೆಗೆದಾಗ ಒಂದು ಅಡಿ ನೀರು ಕಾಣಿಸಿಕೊಳ್ಳುತ್ತಿದೆ. ಈ ನೀರು ದನ-ಕರುಗಳು ಕುಡಿಯಲು ಬಳಸಲಾಗುತ್ತದೆ. ರೈತರೆಲ್ಲ ವಂತಿಗೆ ಹಾಕಿ ನಾಲ್ಕು ಲಕ್ಷ ರೂ. ಖರ್ಚು ಮಾಡಿ ಜೆಸಿಬಿಯಿಂದ ಹರಿ ತೋಡಿಸಿ ನೀರು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ನಾಲ್ಕು ದಿನಗಳಲ್ಲಿ ಒಂದೂವರೆ ಕಿ.ಮೀ. ಉದ್ದದ ಹರಿ ತೋಡುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ರೈತರು ತಿಳಿಸಿದರು. ಇಟಗಿ ಬಸವರಾಜಗೌಡ, ಶಿವಪ್ರಸಾದಗೌಡ, ಶೇಖರರೆಡ್ಡಿಗೌಡ, ಬಸಲಿಂಗಪ್ಪ, ಸಿ.ಎಚ್.ಬಾಬು, ವಿರೂಪಾಕ್ಷಿಗೌಡ, ರಾಯನಗೌಡ, ವೆಂಕಟಾದ್ರಿ ರಮಣಯ್ಯ, ವೆಂಕಟರಾಮರಾಜು, ಮಣ್ಣೂರು ಅಂಜಿನಪ್ಪ, ವಿ.ಸಂಜೀವಪ್ಪ, ವಿ.ತಿಪ್ಪಣ್ಣ, ಕೆ.ವೀರೇಶ ಇತರರಿದ್ದರು.