ಉತ್ತಂಗಿಯಲ್ಲಿ ಮೆಕ್ಕೆಜೋಳದ ಬೆಳೆ ಮಳೆಕೊರತೆಯಿಂದ ಬಾಡಿರುವುದು. 
ಬಳ್ಳಾರಿ

ಹಣವಿಲ್ಲದೆ ಬೆಳೆ ವಿಮೆ ಕಟ್ಟದ ರೈತರು

ಪ್ರಮುಖ ಮುಖ್ಯಾಂಶಗಳು

  • ಸಮರ್ಪಕ
  • ಬಾರದ ಮಳೆ
  • ಸಾಲದ ಹೊರೆ

ಹೂವಿನಹಡಗಲಿ:

ಈ ವರ್ಷ ಪ್ರಕೃತಿಯ ಏರುಪೇರು ರೈತರಿಗೆ ದೊಡ್ಡ ಹೊಡೆತ ನೀಡಿದೆ. ಬಿತ್ತನೆ ಸಂದರ್ಭದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಕೃಷಿ ವೆಚ್ಚ ಭರಿಸಲು ಸಾಲ ಮಾಡಿದ್ದ ರೈತರು, ಬೆಳೆ ವಿಮೆ ಪಾವತಿಸಲು ಹಣದ ಕೊರತೆಯಿಂದ ವಿಮೆ ವ್ಯಾಪ್ತಿಯಿಂದ ಹೊರಗುಳಿದಿದ್ದಾರೆ. ಇದೀಗ ಬೆಳೆ ಕೈಕೊಟ್ಟಿರುವುದರಿಂದ ಸಾಲದ ಹೊರೆ ಮತ್ತಷ್ಟು ಹೆಚ್ಚಾಗಿದೆ.

ಮಳೆ ಆಶ್ರಿತ ಪ್ರದೇಶಗಳಲ್ಲಿ ಸಾವಿರಾರು ರೈತರು ಮುಂಗಾರು ಆರಂಭವಾಗುತ್ತಿದ್ದಂತೆ ಜಮೀನು ಸಿದ್ಧಪಡಿಸಿ ಮೆಕ್ಕೆಜೋಳ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತಿದ್ದರು. ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತರಿಗೆ ಆರಂಭದಲ್ಲಿ ಮಳೆ ಕೈಕೊಟ್ಟಿದ್ದು, ನಂತರ ಬಂದ ಮಳೆ ಸಮರ್ಪಕವಾಗದೆ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ಇದರಿಂದ ಇಳುವರಿ ಕುಸಿಯುವ ಆತಂಕ ಎದುರಾಗಿದೆ.
ಬಿತ್ತನೆಗೆ ಮುನ್ನವೇ ರೈತರು ಬಿತ್ತನೆಬೀಜ, ರಸಗೊಬ್ಬರ ಸೇರಿದಂತೆ ಅಗತ್ಯ ಕೃಷಿ ಪರಿಕರಗಳನ್ನು ಸಾಲ ಮಾಡಿ ಖರೀದಿಸಿದ್ದಾರೆ. ಜಮೀನು ಉಳುಮೆ, ಬಿತ್ತನೆ, ಕಳೆ ತೆಗೆಯುವುದು, ಕ್ರಿಮಿನಾಶಕ ಸಿಂಪಡಣೆ ಸೇರಿ ಪ್ರತಿ ಹಂತದಲ್ಲೂ ಖರ್ಚಾಗಿದೆ. ಇಂತಹ ಸಂದರ್ಭದಲ್ಲಿ ಬೆಳೆವಿಮೆ ಕಂತು ಪಾವತಿಸಲು ಹೆಚ್ಚುವರಿ ಹಣ ಹೊಂದಿಸುವುದು ರೈತರಿಗೆ ಕಷ್ಟವಾಗಿದೆ.

ರೈತರು ಬೆಳೆವಿಮೆ ಮಾಡಿಸುವಂತೆ ಕೃಷಿ ಇಲಾಖೆ ಹಾಗೂ ಇ-ಆಡಳಿತ ವ್ಯವಸ್ಥೆಯಿಂದ ತಾಲೂಕಿನ 22ಸಾವಿರ ರೈತರಿಗೆ ಖುದ್ದಾಗಿ ಕರೆ ಮಾಡಲಾಗಿತ್ತು ಮತ್ತು 5 ಸಾವಿರ ರೈತರಿಗೆ ಐವಿಆರ್ ಕರೆ ಮಾಡುವ ಮೂಲಕ ಬೆಳೆವಿಮೆ ಕುರಿತು ಜಾಗೃತಿ ಮೂಡಿಸಿದ ಪರಿಣಾಮ ರೈತರಿಂದ ಬೆಳೆವಿಮೆಗಾಗಿ 34,764 ಅರ್ಜಿ ಸಲ್ಲಿಕೆಯಾಗಿವೆ. ಕಳೆದ ವರ್ಷ 22,431 ಅರ್ಜಿ ಸಲ್ಲಿಕೆಯಾಗಿದ್ದವು. ಈ ಬಾರಿ 12,333 ಅರ್ಜಿ ಹೆಚ್ಚುವರಿ ಬಂದಿದ್ದು, ಶೇ.33 ಹೆಚ್ಚಳವಾಗಿವೆ.

"

ಬೆಳೆವಿಮೆ ಮಾಡಿಸಿಕೊಂಡ ರೈತರಿಗೆ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದ ಸಂದರ್ಭದಲ್ಲಿ ನಿಯಮಾನುಸಾರ ಪರಿಹಾರ ದೊರೆಯುವ ಅವಕಾಶವಿದೆ. ಆದರೆ ಬೆಳೆವಿಮೆ ಕಂತು ಪಾವತಿಸಲು ಸಾಧ್ಯವಾಗದ ರೈತರಿಗೂ ಪ್ರಕೃತಿ ವಿಕೋಪದಿಂದ ಉಂಟಾಗುವ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕು.

— ಹೊಸಮನಿ ಸಿದ್ದಪ್ಪ ತಾಲೂಕು ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ ಹೂವಿನಹಡಗಲಿ

"

ಈ ಬಾರಿ ಮೆಳೆ ಕೊರತೆಯಿಂದ ರೈತರು ಬಿತ್ತನೆ ಮಾಡಿದ ಬೆಳೆಗಳಿಗೆ ವಿಮೆ ಮಾಡಿಸುವಂತೆ ಇಲಾಖೆಯಿಂದ ಖುದ್ದಾಗಿ ರೈತರಿಗೆ ಕರೆ ಮಾಡಿ ಮನವರಿಕೆ ಮಾಡಲಾಗಿತ್ತು. ಕಳೆದ ವರ್ಷಕ್ಕಿಂತ ಈ ಬಾರಿ ವಿಮೆ ಮಾಡಿಸಿದವರ ಸಂಖ್ಯೆ ಹೆಚ್ಚಾಗಿದೆ.

— ಕೆ.ಟಿ.ಮಂಜುನಾಥ ಸಹಾಯಕ ಕೃಷಿ ನಿರ್ದೇಶಕ ಹೂವಿನಹಡಗಲಿ