ಕಂಪ್ಲಿ ನೀರಾವರಿ ನಿಗಮ ಕಚೇರಿ ಆವರಣದಲ್ಲಿ ಸಮರ್ಪಕ ನೀರು ಪೂರೈಕೆಗೆ ಒತ್ತಾಯಿಸಿ ಎಮ್ಮಿಗನೂರು ರೈತರು ದಿಢೀರ್ ಪ್ರತಿಭಟಿಸಿದರು. ಎಇಇ ಎ.ಶ್ರೀನಿವಾಸ, ರೈತರಾದ ಕೆ.ಖಾಸಿಂಸಾಬ್, ಬುರೆಡ್ಡಿ ಸಣ್ಣ ಜಡೆಪ್ಪ, ಬುರೆಡ್ಡಿ ಬಸವರಾಜ, ಸುಮಂತಸ್ವಾಮಿ, ಪಾರ್ಥನವರ ಜಡೆಪ್ಪ, ಹುಲೆಪ್ಪ ಪಿಂಜಾರ, ಗಾಣಿಗರ ಜಡೆಪ್ಪ, ಗಾಣಿಗರ ರಾಜಶೇಖರ ಇತರರಿದ್ದರು.
ಕಂಪ್ಲಿ: ಎಮ್ಮಿಗನೂರು ಭಾಗದ ಸೂಗೂರು ವಿತರಣಾ ನಾಲೆಯ ಕೊನೇ ಭಾಗಕ್ಕೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ನೀರಾವರಿ ನಿಗಮ ಕಚೇರಿ ಆವರಣದಲ್ಲಿ ಸೋಮವಾರ ರೈತರು ದಿಢೀರ್ ಪ್ರತಿಭಟನೆ ನಡೆಸಿದರು.
ರೈತ ಸಂಘ ತಾಲೂಕು ಅಧ್ಯಕ್ಷ ವಿ.ವೀರೇಶ್ ಮಾತನಾಡಿ, ಅಲ್ಪವಾದಿ ಜೋಳ ಬೆಳೆದಿದ್ದು ಐದು ದಿನಗಳಾದರೂ ನಾಲೆಯ ನೀರು ದೊರಕಿಲ್ಲ. ನಾಲೆಗೆ 50ಕ್ಯೂಸೆಕ್ ನೀರು ಹರಿಸುವ ಜತೆಗೆ ಅಚ್ಚುಕಟ್ಟು ಪ್ರದೇಶದ ಕೃಷಿ ಭೂಮಿಗೆ ನೀರೊದಗಿಸಲು ಕ್ರಮ ವಹಿಸಬೇಕು. ನಾಲೆ ಮೇಲ್ಭಾಗದಲ್ಲಿ ಸೈಫಾನ್ ಪೈಪು, ನೆಲದೊಳಗೆ ಪೈಪು, ಮೋಟಾರ್ ಅಳವಡಿಸಿಕೊಂಡು ನೀರು ಪಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ನೀರಾವರಿ ನಿಗಮ ಎಇಇ ಎ. ಶ್ರೀನಿವಾಸ ಮಾತನಾಡಿ, ಮಳೆ ಕೊರತೆ ಕಾರಣ ಜಲಾಶಯ ನೀರನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ನಾಲೆ ಮೇಲ್ಭಾಗದ ನೀರು ಕಳವು ತಪ್ಪಿಸಿ ಟೇಲೆಂಡ್ ವರೆಗೆ ನೀರು ತಲುಪಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.