ಶ್ರೀರಾಮರಂಗಾಪುರದಿಂದ ಏಳುಬೆಂಚಿಗೆ ತೆರಳುವ ರಸ್ತೆಯ ಗುಂಡಿಗೆ ಮಣ್ಣು ತುಂಬುತ್ತಿರುವ ಯುವ ರೈತರು.
ಕಂಪ್ಲಿ: ಶ್ರೀರಾಮರಂಗಾಪುರದಿಂದ ಏಳುಬೆಂಚಿಗೆ ತೆರಳುವ ರಸ್ತೆಯ ಉದ್ದಕ್ಕೂ ಗುಂಡಿಗಳು ಬಿದ್ದು ದ್ವಿಚಕ್ರವಾಹನ ಸವಾರರಿಗೆ ತೊಂದರೆಯಾಗಿತ್ತು. ಪದೇಪದೆ ಆಯತಪ್ಪಿ ದ್ವಿಚಕ್ರ ವಾಹನಗಳು ಬಿದ್ದು ಅಪಘಾತಗಳಾಗುತ್ತಿದ್ದವು.
ಸುರಕ್ಷಿತ ಚಾಲನೆಗಾಗಿ ರಸ್ತೆಯ ಗುಂಡಿಗಳಿಗೆ ಯುವ ರೈತರೇ ಮಣ್ಣು ತುಂಬಿ ಸರಿಪಡಿಸಿದ ಸಾಮಾಜಿಕ ಕಳಕಳಿಯ ಘಟನೆ ಶನಿವಾರ ನಡೆಯಿತು.
ಶ್ರೀರಾಮರಂಗಾಪುರದ ರೈತ ಮುಖಂಡ ಪೊತ್ತೂರು ನಾರಾಯಣಸ್ವಾಮಿ ಮಾತನಾಡಿ, ಶ್ರೀರಾಮರಂಗಾಪುರದಿಂದ ಏಳುಬೆಂಚಿಗೆ ತೆರಳುವ 5ಕಿ.ಮೀ.ನಷ್ಟು ರಸ್ತೆಯಲ್ಲಿ ರೈತರು ಜಿಂದಾಲ್ ನೌಕರರು ದ್ವಿಚಕ್ರವಾಹನಗಳ ಮೂಲಕ ಸಂಚರಿಸುತ್ತಿದ್ದು ರಸ್ತೆಯ ಕುಣಿಗೆ ಸಿಲುಕಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಅಪಘಾತದಲ್ಲಿ ಒಬ್ಬ ತೀರಿಕೊಂಡಿದ್ದಾರೆ.
ಅಪಘಾತ ತಪ್ಪಿಸಲು ಗ್ರಾಮದ ಯುವಕರೊಂದಿಗೆ ಸೇರಿ ಕುಣಿಗಳಿಗೆ ಮಣ್ಣು ತುಂಬಿಸಿದ್ದೇವೆ ಎಂದರು. ಕುಣಿಗೆ ಮಣ್ಣು ತುಂಬಿಸುವಲ್ಲಿ ಗ್ರಾಮದ ಯುವ ರೈತರಾದ ವೈ.ಪಿ.ರವಿಕುಮಾರ್, ಪಚ್ಚಿಪಾಟಿ ರಾಮಾಂಜನೇಯಲು, ನವೀನ್ ಇತರರಿದ್ದರು.