ಸಂಡೂರಿನಲ್ಲಿ ರೈತಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಅನಿಲ್‌ಕುಮಾರ್‌ಗೆ ಮನವಿ ಸಲ್ಲಿಸಿದರು. ಕಲ್ಯಾಣ ಕರ್ನಾಟಕ ವಿಭಾಗೀಯ ಕಾರ್ಯದರ್ಶಿ ಎಂ.ಎಲ್.ಕೆ.ನಾಯ್ಡು, ಜಿಲ್ಲಾ ಉಪಾಧ್ಯಕ್ಷ ವಿರೂಪಾಕ್ಷಿಗೌಡ, ಪ್ರಮುಖರಾದ ಷಣ್ಮುಖಪ್ಪ, ಎ.ರಂಗಪ್ಪ, ಟಿ.ಎಂ.ಮಹೇಶ್, ಟಿ.ರಮೇಶ್ ಇದ್ದರು.
ಸ್ಮಶಾನ ಭೂಮಿ ವಶಕ್ಕೆ ಪಡೆದು ಅಭಿವೃದ್ಧಿಗೊಳಿಸಿ
ತಹಸೀಲ್ದಾರ್, ತಾಪಂ ಇಒ ಹಾಗೂ ಪಿಎಸ್‌ಐಗೆ ರೈತ ಸಂಘ ಮನವಿ
ಸಂಡೂರು: ಬನ್ನಿಹಟ್ಟಿಯಲ್ಲಿ ಸ್ಮಶಾನ ಭೂಮಿ ಬಿಟ್ಟುಕೊಡಬೇಕೆಂದು ಕೋರಿದ ರೈತ ಮುಖಂಡಗೆ ಜೀವ ಬೆದರಿಕೆ ಹಾಕುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ರಕ್ಷಣೆ ನೀಡುವಂತೆ ಆಗ್ರಹಿಸಿ ತಹಸೀಲ್ದಾರ್ ಅನಿಲ್‌ಕುಮಾರ್, ತಾಪಂ ಇಒ ಮಡಗಿನ ಬಸಪ್ಪ, ಪಿಎಸ್‌ಐ ಡಾಕೇಶ್ ನಾಯ್ಕಗೆ ರೈತ ಸಂಘದಿಂದ ಬುಧವಾರ ಪ್ರತ್ಯೇಕ ಮನವಿ ಸಲ್ಲಿಸಲಾಯಿತು.
ಸಂಘದ ಕಲ್ಯಾಣ ಕರ್ನಾಟಕ ವಿಭಾಗೀಯ ಕಾರ್ಯದರ್ಶಿ ಎಂ.ಎಲ್.ಕೆ.ನಾಯ್ಡು ಮಾತನಾಡಿ, ತೋರಣಗಲ್ ಹೋಬಳಿ ಬನ್ನಿಹಟ್ಟಿ ಗ್ರಾಮದ ಸ್ಮಶಾನ ಭೂಮಿ ಕಂದಾಯ ಸರ್ವೇ ನಂ.69 6.54, ಸರ್ವೇ ನಂ.66 2.02, ಸರ್ವೇ ನಂ.57 0.57ರಲ್ಲಿ ಇದ್ದು, ಕಾಂಪೌಂಡ್ ನಿರ್ಮಿಸಲು ಗ್ರಾಪಂಗೆ ಆದೇಶ ಬಂದಿದೆ. ಆದರೆ, ಗ್ರಾಮದ ಬಸವನಗೌಡ, ಹನುಮನಗೌಡ, ಚಂದ್ರಗೌಡ, ಜಗದೀಶ, ನಾಗನಗೌಡ, ಶಿವನಗೌಡ ಅವರ ವಿರೋಧದಿಂದ ಗ್ರಾಪಂ ಸಿಬ್ಬಂದಿ ಯಾವುದೇ ಕೆಲಸ ಮಾಡಿಲ್ಲ. ಅಲ್ಲದೆ, ರೈತ ಮುಖಂಡ ವಿರೂಪಾಕ್ಷಿಗೌಡಗೆ ‘ನೀನು ತಹಸೀಲ್ದಾರ್‌ಗೆ ದೂರು, ಅರ್ಜಿ ಕೋಡುತ್ತೀಯಾ’ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಹಾಗಾಗಿ ರೈತ ಮುಖಂಡ ವಿರೂಪಾಕ್ಷಿಗೌಡಗೆ ರಕ್ಷಣೆ ಒದಗಿಸಬೇಕು ಮತ್ತು ಸ್ಮಶಾನಕ್ಕಾಗಿ ಕಾಯ್ದಿರಿಸಿರುವ ಭೂಮಿಯನ್ನು ಕೂಡಲೇ ವಶಕ್ಕೆ ಪಡೆದು, ಅಭಿವೃದ್ಧಿಗೊಳಿಸಬೇಕೆಂದು ಮನವಿ ಮಾಡಿದರು.