ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಕಸರತ್ತು 
ಬಳ್ಳಾರಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಕಸರತ್ತು

ಪ್ರಮುಖ ಮುಖ್ಯಾಂಶಗಳು

  • ಸುಧಾರಣೆ
ಬಳ್ಳಾರಿ : ಇದೇ ಮಾ.18ರಿಂದ ಏ.2ರವರೆಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆಗೆ ಶಾಲಾ ಶಿಕ್ಷಣ ಇಲಾಖೆ ಸಿದ್ಧತೆಗೊಂಡಿದೆ. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿನ್ನಡೆ ಅನುಭವಿಸಿದ್ದ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ, ಈ ಬಾರಿ ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಲು ಸನ್ನದ್ಧವಾಗಿದೆ. 2023-24ನೇ ಸಾಲಿನಲ್ಲಿ ಶೇ 64.99ರಷ್ಟು ಫಲಿತಾಂಶದೊಂದಿಗೆ 28ನೇ ಸ್ಥಾನಕ್ಕೆ ಕುಸಿದಿದ್ದ ಜಿಲ್ಲೆಯನ್ನು ಈ ಬಾರಿ ಅಗ್ರಸ್ಥಾನಗಳ ಪಟ್ಟಿಗೆ ತರಲು ಇಲಾಖೆ ವಿಶೇಷ ಕಾರ್ಯತಂತ್ರಗಳನ್ನು ರೂಪಿಸಿದೆ.
ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಹೆಚ್ಚಿಸಲು ಮತ್ತು ಶಿಸ್ತುಬದ್ಧ ತಯಾರಿಗಾಗಿ ಇಲಾಖೆ ಹಲವು ವಿನೂತನ ಕ್ರಮಗಳನ್ನು ಜಾರಿಗೆ ತಂದಿದೆ. ವೇಕ್ ಅಪ್ ಕಾಲ್ ಮೂಲಕ ಪ್ರತಿದಿನ ಬೆಳಗಿನ ಜಾವ ಐದು ಗಂಟೆಗೆ ವಿದ್ಯಾರ್ಥಿಗಳನ್ನು ಎಬ್ಬಿಸಿ ಓದಿಗೆ ಪ್ರೇರೇಪಿಸುವ ಕಾರ್ಯ ನಡೆಯುತ್ತಿದೆ. ಕಳೆದ ಒಂದು ವರ್ಷದಿಂದ ಬೆಳಗ್ಗೆ ಒಂಬತ್ತ ರಿಂದ ಹತ್ತರವರೆಗೆ ವಿಶೇಷ ತರಗತಿಗಳನ್ನು ನಡೆಸಿದೆ. ಶಾಲಾ ಅವಧಿಯ ನಂತರ ಸಂಜೆ ನಾಲ್ಕ ರಿಂದ ಐದರವರೆಗೆ ವಿದ್ಯಾರ್ಥಿಗಳ ನಡುವೆ ಗುಂಪು ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಗ್ರಾಮಗಳಲ್ಲಿನ ಗ್ರಂಥಾಲಯಗಳಲ್ಲಿ ‘ಸ್ಮಾರ್ಟ್ ಕ್ಲಾಸ್’ ಮೂಲಕ ಕಠಿಣ ವಿಷಯಗಳನ್ನು ಸುಲಭವಾಗಿ ಅರ್ಥೈಸಲಾಗುತ್ತಿದೆ. ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳನ್ನು ಉತ್ತೇಜಿಸಲು ‘ಮಿಷನ್ 40’ ಎಂಬ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಪ್ರತಿ ವಿಷಯದಲ್ಲಿ ಯಾವ ಪಾಠಕ್ಕೆ ಎಷ್ಟು ಅಂಕಗಳು ಸಿಗಲಿವೆ ಎಂಬ ’ನೀಲಿ ನಕ್ಷೆ’ ಬಿಡುಗಡೆ ಮಾಡುವ ಮೂಲಕ ವಿದ್ಯಾರ್ಥಿಗಳ ಗೊಂದಲ ನಿವಾರಿಸಲಾಗಿದೆ. ವಿಷಯವಾರು ತಜ್ಞರೊಂದಿಗೆ ’ಫೋನ್-ಇನ್’ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳ ಸಂದೇಹಗಳಿಗೆ ನೇರ ಪರಿಹಾರ ನೀಡಲಾಗುತ್ತಿದೆ. ಜುಲೈನಿಂದಲೇ ಲೆಸನ್ ಬೇಸ್ ಅಸೆಸ್‌ಮೆಂಟ್( ಪಾಠ ಆಧಾರಿತ ಮೌಲ್ಯಮಾಪನ) ಈ ಪದ್ಧತಿಯನ್ನು ಇದೇ ಮೊದಲ ಬಾರಿಗೆ ಅಳವಡಿಸಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳಿಗೆ ಪಾಠ ಅರ್ಥ ಮಾಡಿಸಿಯೇ ಶಿಕ್ಷಕರು ಮುಂದಿನ ಪಾಠಕ್ಕೆ ಹೋಗಬೇಕೆಂಬ ಕಟ್ಟಪ್ಪಣೆ ವಿಧಿಸಲಾಗಿದೆ. ಘಟಕ ಪರೀಕ್ಷೆಗಳನ್ನು ಕಟ್ಟನಿಟ್ಟಾಗಿ ಮಾಡಲಾಗಿದೆ. ಮಕ್ಕಳು ಯಾವ ವಿಷಯದಲ್ಲಿ ಹಿಂದುಳಿದಿದ್ದಾರೋ, ಅಂಥ ವಿಷಯಗಳನ್ನು ಮತ್ತೆ ಬೋಧನೆ ಮಾಡುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ. ಇದಕ್ಕಾಗಿ ಶಾಲೆ ಮುಗಿದ ಬಳಿಕ ಪ್ರತಿದಿನ ಪರಿಹಾರ ಬೋಧನೆ ಎಂಬ ತರಗತಿಗಳ ಆರಂಭಿಸಿ ಫಲಿತಾಂಶ ಹೆಚ್ಚಿಸಲು ಹರಸಾಹಸ ಪಟ್ಟಿದೆ.
ಬಾಕ್ಸ್ : ಮಾ.18ರಿಂದ ಆರಂಭಗೊಳ್ಳಲಿದ್ದು ಜಿಲ್ಲೆಯ ಒಟ್ಟು 65 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಬಳ್ಳಾರಿ ಪೂರ್ವ 15, ಕುರುಗೋಡು 25, ಸಂಡೂರು 11, ಸಿರಗುಪ್ಪ 14 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿವ ನೀರು, ಆಸನ ವ್ಯವಸ್ಥೆ, ಸಿಸಿ ಕ್ಯಾಮೆರಾ, ವೆಬ್ ಪ್ರಕ್ರಿಯೆ, ಇಂಟರನೆಟ್ ವ್ಯವಸ್ಥೆ ಕೈಗೊಳ್ಳಲಾಗಿದೆ. 65 ಸ್ಥಾನಿಕ ಜಾಗೃತ ದಳದ ಅಧಿಕಾರಿಗಳ ನೇಮಕ ಮಾಡಲಾಗಿದೆ. ವಿದ್ಯಾರ್ಥಿಗಳು ಸುಸೂತ್ರವಾಗಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ 23,282 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 19,733 ರೆಗ್ಯುಲರ್ ವಿದ್ಯಾರ್ಥಿಗಳು , 1328 ಪುನರಾವರ್ತಿತ, 2009 ಖಾಸಗಿ ಪುನರಾವರ್ತಿತ ಹಾಗೂ 212 ಖಾಸಗಿ ರೆಗ್ಯುಲರ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯ ಪ್ರೌಢಶಾಲೆಗಳಲ್ಲಿ 487 ಶಿಕ್ಷಕರ ಹುದ್ದೆಗಳು ಖಾಲಿ ಇರುವುದು ದೊಡ್ಡ ಸವಾಲಾಗಿತ್ತು. ಆದರೆ, ಇಲಾಖೆಯು ಇದನ್ನು ಮೆಟ್ಟಿನಿಲ್ಲಲು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಯಾವುದೇ ಪಾಠ ಬಾಕಿ ಉಳಿಯದಂತೆ ಕ್ರಮ ವಹಿಸಿದೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಇಡೀ ಜಿಲ್ಲಾ ಶಿಕ್ಷಣ ಇಲಾಖೆ ಕಾರ್ಯಪ್ರವೃತ್ತರಾಗಿದ್ದು, ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ ಹೊಸ ಮೈಲಿಗಲ್ಲು ಸ್ಥಾಪಿಸುವ ಲಕ್ಷಣಗಳು ಗೋಚರಿಸುತ್ತಿವೆ.
ಕೋಟ್...ನಮ್ಮ ಗುರಿ ಕೇವಲ ಅಂಕಗಳಲ್ಲ, ಜಿಲ್ಲೆಯ ಶೈಕ್ಷಣಿಕ ಗುಣಮಟ್ಟವನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವುದು. ಶಿಕ್ಷಕ ಕೊರತೆಯ ನಡುವೆಯೂ ಅತಿಥಿ ಶಿಕ್ಷಕರು ಮತ್ತು ಪಾಲಕರ ಸಹಕಾರದಿಂದ ಈ ಬಾರಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ.
- ಬಿ.ಉಮಾದೇವಿ, ಡಿಡಿಪಿಐ, ಬಳ್ಳಾರಿ.