ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಧರ್ಮಭವನದಲ್ಲಿ ಆಯೋಜಿಸಿದ್ದ ಶ್ರಾವಣ ಸಂಜೆ ಹಾಗೂ ಧರ್ಮ ಸಮಾರಂಭ ಕಾರ್ಯಕ್ರಮವನ್ನು ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ ಉದ್ಘಾಟಿಸಿದರು. ವರಸದ್ಯೋಜಾತ ಸ್ವಾಮೀಜಿ, ಮಾನಿಹಳ್ಳಿ ಪುರವರ್ಗ ಮಠದ ಡಾ. ಮಳೆಯೋಗೀಶ್ವರ ಸ್ವಾಮೀಜಿ, ಡಾ.ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ಆಡಳಿತಾಧಿಕಾರಿ ಡಾ. ಟಿ ಎಂ ಚಂದ್ರಶೇಖರಯ್ಯ ಇತರರಿದ್ದರು. 
ಬಳ್ಳಾರಿ

ಪ್ರತಿಯೊಬ್ಬರೂ ವೃತ್ತಿಯನ್ನು ಗೌರವಿಸಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ವಿಜ್ಞಾನ,
  • ಸಾಹಿತ್ಯ,
  • ರಾಜಕೀಯ
ಹರಪನಹಳ್ಳಿ: ಶ್ರದ್ಧೆ ಮತ್ತು ಕಾಯಕದಿಂದ ಯಶಸ್ಸು ಲಭಿಸಲು ಸಾಧ್ಯ, ಇವೆರಡೂ ಭಾರತೀಯರ ಮೂಲ ತತ್ವಗಳಾಗಿವೆ ಎಂದು ತೆಗ್ಗಿನ ಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಸ್ವಾಮೀಜಿ ಹೇಳಿದರು.
ತೆಗ್ಗಿನಮಠ ಸಂಸ್ಥಾನದ ಧರ್ಮಭವನದಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಶ್ರಾವಣ ಸಂಜೆ ಹಾಗೂ ಧರ್ಮ ಸಮಾರಂಭ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಶರಣರ ದೃಷ್ಟಿಯಲ್ಲಿ ಕಾಯಕವೆಂಬುದು ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಲ್ಲ ಅದು ಭಗವಂತನ ಕೃಪೆಗೆ ಪಾತ್ರವಾಗುವಷ್ಟೇ ಪವಿತ್ರವಾಗಿದೆ. ಪ್ರಾಮಾಣಿಕತೆಯಿಂದ ಮಾಡುವ ಕಾಯಕದಲ್ಲಿ ಮುಕ್ತಿ ಲಭಿಸಲಿದೆ. ವಿಜ್ಞಾನ, ಸಾಹಿತ್ಯ, ರಾಜಕೀಯ ಅಥವಾ ಆಧ್ಯಾತ್ಮಿಕವಾಗಿ ಯಶಸ್ಸು ಲಭಿಸಲು ನಿಷ್ಠೆಯಿಂದ ಕಾಯಕ ಮಾಡಬೇಕು. ನಾವು ಮಾಡುವ ವೃತ್ತಿಯನ್ನು ಗೌರವಿಸಬೇಕೆ ಹೊರತು ಕೀಳರಿಮೆ ಭಾವನೆ ಹೊಂದಬಾರದು. ಶ್ರದ್ಧೆಯಿಂದ ಕೆಲಸ ಮಾಡುತ್ತಿರುವ ರೈತ ದೇಶ ಉಳಿಸಿದರೆ, ಶ್ರದ್ಧಾ ಭಕ್ತಿ ಹೊಂದಿದ ಶಿಕ್ಷಕನು ರಾಷ್ಟ್ರ ನಿರ್ಮಾಣ ಮಾಡಿದ್ದಾನೆ. ಹಾಗಾಗಿ ನಾವೆಲ್ಲರೂ ಜಗದ ನಾಯಕರಾಗಬೇಕೆಂದರೆ ನಮ್ಮ ಬದುಕಿನುದ್ದಕ್ಕೂ ಶ್ರದ್ಧೆಯನ್ನು ಹೊಂದಬೇಕು ಎಂದರು.
ತೆಗ್ಗಿನಮಠದ ಆಡಳಿತಾಧಿಕಾರಿ ಡಾ. ಟಿ ಎಂ ಚಂದ್ರಶೇಖರಯ್ಯ ಮಾತನಾಡಿ, ಹಿಂದುಳಿದ ಹರಪನಹಳ್ಳಿಯನ್ನು ಶಿಕ್ಷಣ ಕಾಶಿಯನ್ನಾಗಿ ಪರಿವರ್ತಿಸಿದ ಕೀರ್ತಿ ಡಾ.ಚಂದ್ರಮೌಳೀಶ್ವರ ಶಿವಾಚಾರ್ಯ ಸ್ವಾಮೀಜಿಗೆ ಸಲ್ಲುತ್ತದೆ. ಮದ್ಯ ಕರ್ನಾಟಕ ಸೇರಿದಂತೆ ನಾಡಿನಾದ್ಯಂತ 64ಕ್ಕೂ ಹೆಚ್ಚು ಕೌಶಲಯುತ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‌ಗಳನ್ನು ತೆರೆದು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಸ್ವಯಂ ಉದ್ಯೋಗ ಕಟ್ಟಿಕೊಳ್ಳಲು ಆಸರೆಯಾಗಿದ್ದಾರೆ. ಅವರ ದೂರದೃಷ್ಟಿಯಿಂದ ಶ್ರೀ ಮಠದ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಸ್ಥಾನಮಾನ ಪಡೆಯುವ ಮೂಲಕ ಹರಪನಹಳ್ಳಿಯ ಹಿರಿಮೆಯನ್ನು ಹೆಚ್ಚಿಸಿರುವುದು ಸಂತಸದ ಸಂಗತಿ ಎಂದರು.
ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ್ ಮಾತನಾಡಿ, ಶ್ರಾವಣವು ಹೆಣ್ಣು ಮಕ್ಕಳಿಗೆ ಪ್ರಿಯವಾದ ಹಬ್ಬವಾಗಿದೆ. ಇದು ಎಲ್ಲ ಹಬ್ಬಗಳ ಹೆಬ್ಬಾಗಿಲಾಗಿದೆ. ಶ್ರಾವಣದಲ್ಲಿ ಶ್ರದ್ಧಾ ಭಕ್ತಿಯಿಂದ ಹೆಣ್ಣುಮಕ್ಕಳು ಮನೆಯ ಸರ್ವತೋಮುಖ ಅಭಿವೃದ್ಧಿಗೆ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ತಂದೆ-ತಾಯಿಗಳಿಲ್ಲದ ಹೆಣ್ಣು ಮಕ್ಕಳಿಗೆ ತೆಗ್ಗಿನಮಠವು ತವರುಮನೆಯಿದ್ದಂತೆ ಎಂದರು.
ಪ್ರಮುಖರಾದ ವಿಜಿ ಯಾವಗಲ್, ಎಚ್‌ಎಂ ಲಲಿತಮ್ಮ, ಟಿಎಂ ಪ್ರತೀಕ್, ಉದ್ಯಮಿ ಉತ್ತಮ್ ಚಂದ್ ಜೈನ್, ಗೊಂಗಡಿ ನಾಗರಾಜ, ಜಯರಾಜೇಂದ್ರನ್, ಟಿಎಂ ವೀರೇಂದ್ರಸ್ವಾಮಿ, ಕೆ ಭೀಮಪ್ಪ , ಮುದಗಲ್ ಗುರುನಾಥ, ಪಿಬಿ ಗೌಡ್ರು, ಕೆ ದೇವೇಶ, ಟಿಎಂಎಇ ಶಿಕ್ಷಣ ಮಹಾವಿದ್ಯಾಲಯದ ಡೀನ್ ಟಿಎಂ ರಾಜಶೇಖರ್, ಸಿಎಂ ಕೊಟ್ರಯ್ಯ ಇತರರಿದ್ದರು.