ಕಂಪ್ಲಿ ಎಂ.ಡಿ.ಕ್ಯಾಂಪ್‌ನಲ್ಲಿ ಬೀದಿ ನಾಟಕ ಪ್ರದರ್ಶನಕ್ಕೆ ಪುರಸಭೆ ಮಾಜಿ ಸದಸ್ಯ ಆಂಜನೇಯ ಚಾಲನೆ ನೀಡಿದರು. ಪ್ರಮುಖರಾದ ಕೆ.ಶೋಭಾ, ಗುರುಪಾದಮ್ಮ, ಈರಮ್ಮ, ಚಂದ್ರಲೇಖ ಇತರರಿದ್ದರು.
- ಪುರಸಭೆ ಮಾಜಿ ಸದಸ್ಯ ಆಂಜನೇಯ ಮನವಿ
- ಕಂಪ್ಲಿ ಆರೋಗ್ಯ ಕಾರ್ಯಕ್ರಮ ಬೀದಿ ನಾಟಕ
ಕಂಪ್ಲಿ: ಯಾವುದೇ ರೋಗವನ್ನು ನಿರ್ಲಕ್ಷಿಸದೆ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಪುರಸಭೆ ಮಾಜಿ ಸದಸ್ಯ ಆಂಜನೇಯ ಹೇಳಿದರು.
ಪಟ್ಟಣದ ಎಂ.ಡಿ.ಕ್ಯಾಂಪ್‌ನಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಸಿರಗುಪ್ಪದ ನೇತ್ರ ಕಲಾ ಸಂಘದ ಕಲಾವಿದರು ಪ್ರದರ್ಶಿಸಿದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಕುರಿತ ಬೀದಿ ನಾಟಕಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಮತ್ತು ಪರಿಣಾಮಕಾರಿ ಚಿಕಿತ್ಸೆ ದೊರೆಯುವುದರಿಂದ ಚಿಕಿತ್ಸೆ ಪಡೆದುಕೊಳ್ಳಬೇಕು. ವೈಯಕ್ತಿಕ ಮತ್ತು ಸಮುದಾಯಿಕ ಸ್ವಚ್ಛತೆ ಕಾಪಾಡುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ ಮಾತನಾಡಿ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಯೋಜನೆಗಳನ್ನು ಸಾರ್ವಜನಿಕರು ಅರಿತು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಗರ್ಭಿಣಿಯರ ಆರೈಕೆ, 108 ಆಂಬುಲೆನ್ಸ್ ಸೌಲಭ್ಯ, ನಗು-ಮಗು ವಾಹನ ಸೌಲಭ್ಯ, ಹದಿಹರೆಯದವರ ಆರೋಗ್ಯ, ಕ್ಷಯ, ಕುಷ್ಠ, ಸಾಂಕ್ರಾಮಿಕ ಕಾಯಿಲೆಗಳು, ಆಯುಷ್ಮಾನ್ ಭಾರತ್ ಕುರಿತು ಹಾಡು ಮತ್ತು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರಾದ ಗುರುಪಾದಮ್ಮ, ಈರಮ್ಮ, ಆಶಾ ಕಾರ್ಯಕರ್ತೆ ಚಂದ್ರಲೇಖಾ, ಶಿಕ್ಷಕರು, ಕಾಲನಿ ನಿವಾಸಿಗಳು, ವಿದ್ಯಾರ್ಥಿಗಳಿದ್ದರು.