ಬಳ್ಳಾರಿಯ ಶ್ರೀನಂದ ಶಾಲೆ ಮತ್ತು ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಸಂಸ್ಥೆ ಸಹಯೋಗದೊಂದಿಗೆ ವಿಜಯವಾಣಿ ದಿನಪತ್ರಿಕೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
- ಪರಿಸರ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ
- ಪ್ಲಾಸ್ಟಿಕ್ ಬಳಕೆಯನ್ನು ಮಿತಗೊಳಿಸಿ
ಬಳ್ಳಾರಿ : ಮರಗಳು ಕೇವಲ ಮನುಷ್ಯನ ಉಸಿರಾಟಕ್ಕೆ ಆಮ್ಲಜನಕ ನೀಡುವುದಿಲ್ಲ, ಬದಲಿಗೆ ನೆರಳು ನೀಡಿ ಹವಾಮಾನ ವೈಪರೀತ್ಯವನ್ನು ತಡೆಯುವ ಶಕ್ತಿ ಹೊಂದಿವೆ ಎಂದು ವೈದ್ಯ ಎಸ್.ವಿ.ಪಾಟೀಲ್ ಕರೆ ಹೇಳಿದರು.
ವಿಶ್ವ ಪರಿಸರ ದಿನದ ನಿಮಿತ್ತ ವಿಜಯವಾಣಿ ದಿನಪತ್ರಿಕೆ ವತಿಯಿಂದ ನಗರದ ಬಿಮ್ಸ್ ರಸ್ತೆಯ ವಿದ್ಯಾನಗರದಲ್ಲಿರುವ ಶ್ರೀನಂದ ಶಾಲೆ ಮತ್ತು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮತ್ತು ಕಾಳಜಿ ಬೆಳೆಸುವ ಉದ್ದೇಶದಿಂದ ಶುಕ್ರವಾರ ಆಯೋಜಿಸಿದ್ದ ಮಕ್ಕಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕಳೆದ ಕೆಲವು ವರ್ಷಗಳಿಂದ ಮಳೆ ಪ್ರಮಾಣ ತಗ್ಗಲು ಮರಗಳ ಸಂಖ್ಯೆ ಕ್ಷೀಣಿಸುತ್ತಿವೆ. ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರೂ ಕೇವಲ ಗಿಡ ನೆಡುವುದಲ್ಲದೆ ಅದನ್ನು ಪೋಷಿಸಿ ಬೆಳೆಸಬೇಕು. ಪರಿಸರ ನಾಶ ಮಾಡುವವರ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು. ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲುವುದು ಮುಖ್ಯವಲ್ಲ, ಅದರಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವುದು ಮುಖ್ಯ ಎಂದರು.
ಶ್ರೀನಂದ ಶಾಲೆ ಮತ್ತು ಸಂಯುಕ್ತ ಪದವಿ ಪೂರ್ವ ಕಾಲೇಜು ಅಧ್ಯಕ್ಷ ವೇಮುಲಪಲ್ಲಿ ಗಾಂಧಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮನುಷ್ಯನೇ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಪ್ಲಾಸ್ಟಿಕ್ ಬಳಕೆಯನ್ನು ಮಿತಗೊಳಿಸಿ ಪರ್ಯಾವರಣವನ್ನು ಉಳಿಸಬೇಕಿದೆ. ನೀರಿನ ದುರುಪಯೋಗವನ್ನು ತಡೆಗಟ್ಟಬೇಕು ಎಂದು ತಿಳಿಸಿದರು.
ನಾವು ಮಕ್ಕಳನ್ನು ಹೇಗೆ ಪ್ರೀತಿಯಿಂದ ನೋಡಿಕೊಳ್ಳುತ್ತೇವೆಯೋ, ಅದೇ ರೀತಿ ಮರಗಳನ್ನೂ ಪೋಷಿಸಬೇಕು. ವೃಕ್ಷವನ್ನು ನೀನು ರಕ್ಷಿಸಿದರೆ, ನಿನ್ನನ್ನು ವೃಕ್ಷ ರಕ್ಷಿಸುತ್ತದೆ. ಇಂದಿನಿಂದ ಗಿಡ ಬೆಳೆಸಿದವರು, ಮುಂದಿನ ದಿನಗಳಲ್ಲಿ ವನವನ್ನೇ ಬೆಳೆಸಬಲ್ಲರು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಇದೇ ವೇಳೆ ತಮ್ಮ ಮನೆಯಲ್ಲಿ ಗಿಡಗಳನ್ನು ಅತ್ಯುತ್ತಮವಾಗಿ ಬೆಳೆಸಿದವರಿಗೆ 2027ರ ಪರಿಸರ ದಿನಾಚರಣೆಯಂದು ವಿಶೇಷ ಬಹುಮಾನ ವಿತರಿಸುವುದಾಗಿ ಪ್ರಕಟಿಸಿದರು. ಚಿತ್ರಕಲಾ ಶಿಕ್ಷಕ ಬಿ.ಎಂ.ಶಶಿಧರ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿ ಬಹುಮಾನಕ್ಕೆ ಅರ್ಹಗೊಂಡ ಚಿತ್ರಗಳನ್ನು ಆಯ್ಕೆ ಮಾಡಿದರು. ಶಿಕ್ಷಕಿ ಎನ್.ರಾಜೇಶ್ವರಿ ನಿರೂಪಣೆ ಮಾಡಿದರು. ಪ್ರಾಂಶುಪಾಲರಾದ ರಾಜೇಶ್ವರಿ, ಲಕ್ಷ್ಮಿಕಾಂತ, ದೈಹಿಕ ಶಿಕ್ಷಕ ಬಸವರಾಜ್ ಅಚ್ಚುಕಟ್ಟಾಗಿ ಸ್ಪರ್ಧೆ ಆಯೋಜನೆ ಮಾಡಿದರು.
ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ : ವಿಜಯವಾಣಿ ಪತ್ರಿಕೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು. 7 ರಿಂದ 14 ವರ್ಷದೊಳಗಿನ ಮೂರ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಮಕ್ಕಳು ತಮ್ಮ ಕುಂಚದ ಮೂಲಕ ಪ್ರಕೃತಿಯ ವಿವಿಧ ಆಯಾಮಗಳನ್ನು ಬಣ್ಣ ಬಣ್ಣದ ಚಿತ್ರಗಳಾಗಿ ಹಾಳೆಯ ಮೇಲೆ ಇಳಿಸುವ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿ ಕಾಳಜಿ ಮೆರೆದರು.
ಸ್ಪರ್ಧೆಯಲ್ಲಿ ಒಂಬತ್ತನೇಯ ತರಗತಿಯ ತನುಶ್ರೀ ಪ್ರಥಮ ಸ್ಥಾನ, ಹೊತುರ್ ದುರ್ಗಾ ದ್ವಿತೀಯ ಸ್ಥಾನ ಹಾಗೂ ಧ್ಯಾನೇಶ್ ರೆಡ್ಡಿ ಜಿ. ತೃತೀಯ ಸ್ಥಾನ ಪಡೆದರು. ಗಣ್ಯರು ವಿಜೇತರಿಗೆ ನಗದು ಹಾಗೂ ಬಹುಮಾನ ವಿತರಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸದ ಎಲ್ಲರಿಗೂ ಪ್ರಶಂಸಾ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ವಿಆರ್‌ಎಲ್ ಸಂಸ್ಥೆಗೆ ಮೆಚ್ಚುಗೆ : ದೇಶದಲ್ಲಿಯೇ ವಿಆರ್‌ಎಲ್ ಸಂಸ್ಥೆ ಉನ್ನತ ಸ್ಥಾನದಲ್ಲಿದೆ. ಸಾಮಾಜಿಕ ಕಳಕಳಿಯಿಂದ ಇಂತಹ ಕಾರ್ಯಕ್ರಮ ಆಯೋಜಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದೆ. ಕಳೆದ ಹಲವು ವರ್ಷಗಳಿಂದ ವಿನೂತನ ಕಾರ್ಯಕ್ರಮ ಆಯೋಜಿಸುವಲ್ಲಿ ವಿಆರ್‌ಎಲ್ ಒಂದು ಹೆಜ್ಜೆ ಮುಂದಿದೆ. ಇನ್ನೂ ಉನ್ನತ ಸ್ಥಾನಕ್ಕೆ ಬೆಳೆಯಲಿ ಎಂದು ಕಾಲೇಜು ಅಧ್ಯಕ್ಷ ವೇಮುಲಪಲ್ಲಿ ಗಾಂಧಿ ಅವರು ಆಶಿಸಿದರು.