ಕೂಡ್ಲಿಗಿ ತಾಲೂಕಿನ ಸುಟ್ಟ ಕಾರ್ನಾರ ಹಟ್ಟಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು. ಪ್ರಮುಖರಾದ ಪ್ರಹ್ಲಾದ, ಹೊಸಹಳ್ಳಿ ಜಗದೀಶ್, ಅಜ್ಜನಗೌಡ, ದುರುಗಪ್ಪ, ಬೊಮ್ಮಣ್ಣ, ಬೋಸೆ ಮಲ್ಲಯ್ಯ, ಸೂರಣ್ಣ, ಮಾಂತಣ್ಣ, ಎರಿಸ್ವಾಮಿ, ಇಒ ಬಸಣ್ಣ, ಬಸವರಾಜ ಕಂಪ್ಲಿ, ಓಬಣ್ಣ ಇತರರಿದ್ದರು.
- ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸೂಚನೆ
- ಕೂಡ್ಲಿಗಿ ಕಾನಹೊಸಹಳ್ಳಿ ಕಾಮಗಾರಿಗಳಿಗೆ ಭೂಮಿಪೂಜೆ
ಕೂಡ್ಲಿಗಿ: ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿಯೂ ಉತ್ತಮ ಸೌಲಭ್ಯ ನೀಡುವುದರ ಜತೆಗೆ ಉತ್ತಮ ಪರಿಸರ ನಿರ್ಮಾಣ ಮಾಡಿ ಜನರ ಆರೋಗ್ಯ ಕಾಪಾಡಲು ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ತಾಲೂಕಿನ ಕಾನಹೊಸಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ 11.95 ಕೋಟಿ ರೂ. ವೆಚ್ಚದಲ್ಲಿ ಚರಂಡಿ, ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈಗಾಗಲೇ ಹಲವು ಗ್ರಾಮಗಳಲ್ಲಿ ಚರಂಡಿ, ಸಿಸಿ ರಸ್ತೆ ನಿರ್ಮಿಸಲಾಗಿದೆ. ಬೇಸಿಗೆಯಲ್ಲಿ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ನಿಗಾವಹಿಸಬೇಕು. ಇದಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಹುಡೇಂ ಗ್ರಾಮದಲ್ಲಿ ಕೆರೆ ನಿರ್ಮಾಣಕ್ಕೆ ಜಾಗ ಗುರುತಿಸಿದ್ದು, ತಿಪ್ಪೇಹಳ್ಳಿಯಲ್ಲಿ 218 ಎಕರೆ ಕೆರೆ ನಿರ್ಮಾಣಕ್ಕೆ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸುಟ್ಟ ಕರ್ನಾರಹಟ್ಟಿ, ನಡುವಲಹಟ್ಟಿ, ಚೌಟಯ್ಯನಹಟ್ಟಿ, ಹುಡೇಂ ಗ್ರಾಮದಲ್ಲಿ 2 ಕಡೆ, ಕುಮತಿ, ಜುಮ್ಮೋಬನಹಳ್ಳಿಯಲ್ಲಿ ತಲಾ 10 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ, ಜುಮ್ಮೋಬನಹಳ್ಳಿ ಎಸ್ಸಿ ಕಾಲನಿಯಲ್ಲಿ 50 ಲಕ್ಷ ರೂ., ಮ್ಯಾಸರಹಟ್ಟಿಯಲ್ಲಿ 40 ಲಕ್ಷ ರೂ., ಲೋಕಿಕೆರೆ ಎಸ್ಸಿ ಕಾಲನಿಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಹುರುಳಿಹಾಳ್ ಗ್ರಾಮದಿಂದ ತಮ್ಮಯ್ಯನಗುಡ್ಡದವರೆಗೆ 4.95 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಲೋಕಿಕೆರೆಯಿಂದ ಜುಮ್ಮೋಬನಹಳ್ಳಿ-ಪೂಜಾರಹಳ್ಳಿ ಕೂಡು ರಸ್ತೆವರೆಗೆ 4.95 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.