ಬಳ್ಳಾರಿಯ ಪಾರ್ವತಿ ನಗರದ ಸ.ಹಿ.ಪ್ರಾ ಶಾಲೆಯಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮವನ್ನು ಜಿಲ್ಲಾ ನಿರೂಪಣಾಧಿಕಾರಿ ಸಿ.ಸವಿತಾ ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎಳೆನಾಗಪ್ಪ, ಶಾಲಾ ಶಿಕ್ಷಣ ಇಲಾಖೆಯ ಕೋಟ್ರೇಶ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ವೆಂಕಟೇಶ್, ಎಫ್.ಗೌಸೀಯ, ಜಿಲ್ಲಾ ವ್ಯವಸ್ಥಾಪಕ ಕೆ.ಜಗನ್ನಾಥ ಇದ್ದರು.
- ನಿರಂತರ ಅಭ್ಯಾಸ ಜೀವನಕ್ಕೆ ಅಳವಡಿಸಿ
- ಮಕ್ಕಳ ಪ್ರತಿಭೆಗಳ ಗುರುತಿಸಿ
ಬಳ್ಳಾರಿ : ಮಕ್ಕಳು ತಾವು ಕಲಿತ ತರಬೇತಿಯನ್ನು ಕೇವಲ ಶಿಬಿರಕ್ಕೆ ಸೀಮಿತಗೊಳಿಸಬಾರದು ಬದಲಾಗಿ ನಿರಂತರ ಅಭ್ಯಾಸದಿಂದ ಜೀವನಕ್ಕೆ ಅಳವಡಿಸಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಸಿ.ಸವಿತಾ ಹೇಳಿದರು.
ನಗರದ ಪಾರ್ವತಿ ನಗರದ ಸ.ಹಿ.ಪ್ರಾ ಶಾಲೆಯಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯಬಾಲಭವನ ಸೊಸೈಟಿ, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಐದರಿಂದ ಹದಿನಾರು ವರ್ಷದ ಮಕ್ಕಳಿಗಾಗಿ ಆಯೋಜಿಸಲಾಗಿದ್ದ 15 ದಿನಗಳ ಸೃಜನಾತ್ಮಕ ಚಟುವಟಿಕೆಗಳ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಿಂದ ಪಡೆದ ತರಬೇತಿ ಕೇವಲ ಶಿಬಿರಕ್ಕೆ ಸೀಮಿತಗೊಳಿಸದೆ ಬದಲಾಗಿ ನಿರಂತರ ಅಭ್ಯಸಿಸುತ್ತಿರಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ತ್ರಿವೇಣಿ ಪತ್ತಾರ್ ಮಾತನಾಡಿ, ಇಂತಹ ಶಿಬಿರಗಳು ಮಕ್ಕಳ ಪ್ರತಿಭೆಗಳ ಗುರುತಿಸಿ ಬೆಳೆಸುವ ವೇದಿಕೆಯಾಗಿವೆ. ಪ್ರತಿಭಾ ಕಾರಂಜಿ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಮಕ್ಕಳಿಗೆ ಆತ್ಮವಿಶ್ವಾಸ ನೀಡುತ್ತವೆ ಎಂದರು. ಕಾರ್ಯಕ್ರಮದಲ್ಲಿ ಮಕ್ಕಳು ಕಲಿತ ಚಿತ್ರಕಲೆ, ಕರಕುಶಲತೆ , ಸಮೂಹ ನೃತ್ಯ, ಸಂಗೀತ, ಯೋಗ ಹಾಗೂ ಕರಾಟೆ ಪ್ರದರ್ಶನಗಳು ಎಲ್ಲರ ಗಮನ ಸೆಳೆದವು. ಉತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.