ಬಳ್ಳಾರಿ : ಇಲ್ಲಿನ ಬೆಂಗಳೂರು ರಸ್ತೆಯಲ್ಲಿರುವ ಎಪಿಎಂಸಿ ಯಾರ್ಡ್ ಮುಂಭಾಗದ ವಕ್ಫ್ ಆಸ್ತಿ ಸೇರಿದಂತೆ ಜಿಲ್ಲೆಯ ವಿವಿಧಡೆ ಇರುವ ಕೋಟ್ಯಂತರ ರೂಪಾಯಿ ಮೌಲ್ಯದ ವಕ್ಫ್ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗುತ್ತಿದೆ ಎಂದು ವಕ್ಪ್ ಬೋರ್ಡ್ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್ ಆರೋಪಿಸಿದರು.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಂಗಳೂರು ರಸ್ತೆಯ ಎಪಿಎಂಸಿ ಎದುರಿನ 11.5 ಎಕರೆ ವಕ್ಫ್ ಭೂಮಿ ದುರುಪಯೋಗವಾಗುತ್ತಿದ್ದು, ಈ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಕೇವಲ ನಗರ ಪ್ರದೇಶ ಮಾತ್ರವಲ್ಲದೆ, ಸಿರಗುಪ್ಪ ರಸ್ತೆಯ ಹವಾಂಬಾವಿ ಪ್ರದೇಶದಲ್ಲಿರುವ ವಕ್ಫ್ ಜಮೀನು ಸುಮಾರು 103 ಎಕರೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಹೆಸರಿಗೆ ಆಗಿದೆ. ಟಿಪ್ಪು ಸುಲ್ತಾನ್ ಇನಾಂ ಜಮೀನು 33 ಎಕರೆ ಹಾಗೂ ಪಿಂಜಾರ ಹಟ್ಟಿ ಬಳಿಯ ವಕ್ಫ್ ಆಸ್ತಿಗಳು ಖಾಸಗಿ ವ್ಯಕ್ತಿಗಳ ಹೆಸರಿಗೆ ಕಾನೂನುಬಾಹಿರವಾಗಿ ಖಾತಾ ಬದಲಾವಣೆಯಾಗಿವೆ. ಬಿಜೆಪಿ ನಾಯಕರು ವಕ್ಫ್ ವಿಚಾರದಲ್ಲಿ ರಾಜಕೀಯ ಕುತಂತ್ರ ಮಾಡುತ್ತಿದ್ದು, ಜಿಲ್ಲೆಯ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ಈ ಅಕ್ರಮದ ವಿರುದ್ಧ ಮುಸ್ಲಿಂ ಸಮುದಾಯದ ಜತೆಗೆ ಎಲ್ಲ ಸಮುದಾಯದವರು ಸೇರಿ ಪಕ್ಷಾತೀತವಾಗಿ ಹೋರಾಟಕ್ಕೆ ನಡೆಸಿದರೇ ಜಯ ಖಂಡಿತವಾಗಿಯೂ ಸಿಗುತ್ತದೆ ಎಂದರು. ಮುಖಂಡರಾದ ಗೌಸ್‌ಸಾಬ್, ಮಹಮ್ಮದ್ ಅಲಿ ಇದ್ದರು,