ಕಂಪ್ಲಿ ಸಮೀಪದ ಸಣಾಪುರದ ಹೊರವಲಯದಲ್ಲಿ ಮಳೆ, ಗಾಳಿಗೆ ವಾಲಿದ ವಿದ್ಯುತ್.
- ವಿದ್ಯುತ್ ಸಂಪರ್ಕ ಕಡಿತ
- ಬಿತ್ತನೆಬೀಜ ದಾಸ್ತಾನಿಗೆ ಸಿದ್ಧತೆ
ಕಂಪ್ಲಿ: ಪಟ್ಟಣ ಸೇರಿ ತಾಲೂಕಿನಾದ್ಯಂತ ಗುರುವಾರ ರಾತ್ರಿ 20ಮಿ.ಮೀ. ಮಳೆ ಸುರಿದಿದ್ದು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ವಿದ್ಯುತ್ ಪರಿವರ್ತಕಗಳು ಸುಟ್ಟಿವೆ. ಯಾವುದೇ ಪ್ರಾಣಾಪಾಯವಾಗಿಲ್ಲ. ಮಳೆ ಸುರಿದು ವಾತಾವರಣ ತಂಪಾಗಿ ದಗೆ ಕಡಿಮೆಯಾಗಿದೆ. ಸಣಾಪುರ, ಬಸವೇಶ್ವರಕ್ಯಾಂಪ್, ಇಟಗಿ, ಬೆಳಗೋಡ್ ಹಾಳ್, ಕಣವಿ ತಿಮ್ಮಲಾಪುರ ಸೇರಿ ನಾನಾ ಕಡೆ 30 ವಿದ್ಯುತ್ ಕಂಬಗಳು ಬಿದ್ದಿವೆ. 6 ವಿದ್ಯುತ್ ಪರಿವರ್ತಕಗಳು ಸುಟ್ಟಿವೆ. ವಿದ್ಯುತ್ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಬೀಜ ದಾಸ್ತಾನು ಸಿದ್ಧತೆ: ನಗರದ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದ 25ಕೆಜಿ ಭತ್ತ ಎಂಟಿಯು 1010ತಳಿಯ 150ಚೀಲ, ಆರ್‌ಎನ್‌ಆರ್ ತಳಿಯ 100ಚೀಲ, ಬಿಪಿಟಿ ಸೋನಾ ತಳಿಯ 150 ಚೀಲ ಭತ್ತದ ಬೀಜಗಳು, 40ಕೆಜಿ ತೂಕದ ಕೆಬಿಎಸ್ ಎಚ್90 ತಳಿಯ ಸೂರ್ಯಕಾಂತಿ 37 ಚೀಲ, 20ಕೆಜಿಯ ಒಂದು ಚೀಲ ದಾಸ್ತಾನಿದ್ದು, ರೈತರ ಬೇಡಿಕೆಯ ಬೀಜಗಳ ದಾಸ್ತಾನಿಗೆ ಸಿದ್ಧತೆ ನಡೆದಿದೆ.
ಸಿಎಫ್‌ಐಡಿ ಅಗತ್ಯ: ಕೇಂದ್ರ ರೈತ ಗುರುತಿನ ಚೀಟಿ ಎನ್ನುವುದು ರಾಷ್ಟ್ರೀಯ ಅಗ್ರಿಸ್ಟಾೃಕ್ ಅಡಿ ಆಧಾರ್, ಭೂ ದಾಖಲೆಗಳು ಮತ್ತು ಬ್ಯಾಂಕ್ ವಿವರಗಳನ್ನು ಲಿಂಕ್ ಮಾಡುವ ವಿಶಿಷ್ಟ ಡಿಜಿಟಲ್ ಐಡಿಯಾಗಿದೆ. ಕೃಷಿ ಯೋಜನೆಗಳಿಗೆ ನೇರ ಪ್ರಯೋಜನ ಪಡೆಯಲು ಇದು ಸಹಕಾರಿಯಾಗಿದೆ. ರಸಗೊಬ್ಬರ ಪಡೆಯಲು ಕಡ್ಡಾಯವಾಗಿ ಕೇಂದ್ರ ರೈತ ಗುರುತಿನ ಚೀಟಿ ಪಡೆಯಬೇಕು ಎಂದು ಕೃಷಿ ಅಧಿಕಾರಿ ಜ್ಯೋತಿ ತಿಳಿಸಿದರು.