ಕಂಪ್ಲಿ ಕೋಟೆ ಸಹಿಪ್ರಾ ಶಾಲೆಯಲ್ಲಿ ವಿದ್ಯಾರ್ಥಿಗಳು ಶುದ್ಧ ನೀರು ತುಂಬಿಕೊಳ್ಳುತ್ತಿರುವುದು.
ಕಂಪ್ಲಿ: ಪಟ್ಟಣದ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಗೆ ಗುತ್ತಿಗೆದಾರ ಸೋಮವಾರ ವಿದ್ಯುತ್ ಸಂಪರ್ಕ ಒದಗಿಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಶುದ್ಧ ಕುಡಿವ ನೀರು ಸೇವಿಸಿದರು.
ಶೌಚಗೃಹ ನಿರ್ಮಾಣ ಕಾಮಗಾರಿಗೆ ಅಡ್ಡಿಯಾಗುತ್ತಿದೆ ಎಂದು ಒಂದೇ ಆವರಣದಲ್ಲಿರುವ ಎರಡು ಶಾಲೆಗಳಿಗೆ ಕಳೆದ 10 ದಿನಗಳ ಹಿಂದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಇದರಿಂದಾಗಿ ಶುದ್ಧ ಕುಡಿವ ನೀರಿನ ಯಂತ್ರ ಕಾರ್ಯನಿರ್ವಹಿಸುತ್ತಿರಲಿಲ್ಲ. ಶಾಲಾ ಕೊಠಡಿಗಳಲ್ಲಿ ಸಮರ್ಪಕ ಬೆಳಕು, ಗಾಳಿ ವ್ಯವಸ್ಥೆಗೂ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಡಿ.20ರಂದು ‘ವಿದ್ಯುತ್ ಇಲ್ಲದೆ ಏನೇನೂ ಇಲ್ಲ’ ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಗುತ್ತಿಗೆದಾರ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.
ವಿದ್ಯಾರ್ಥಿಗಳು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಇದೀಗ ಮತ್ತೆ ಕಲ್ಪಿಸಲಾಗಿದೆ ಎಂದು ಹೊನ್ನೂರಪ್ಪ ತಿಳಿಸಿದರು.