ಕೊಟ್ಟೂರು ತಾಲೂಕಿನ ಗಜಾಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್‌ಖಾನ್ ಬರ ವೀಕ್ಷಣೆ ಮಾಡಿದರು. ಶಾಸಕರಾದ ಲತಾ ಮಲ್ಲಿಕಾರ್ಜುನ, ಡಾ.ಎನ್.ಟಿ. ಶ್ರೀನಿವಾಸ್, ಡಿಸಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಕ್ರಂ ಅಲಿ ಷಾ, ಎಸ್ಪಿ ಎಸ್. ಜಾಹ್ನವಿ, ಎಸಿ ವಿವೇಕಾನಂದ, ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಮಂಜುನಾಥ, ಉಪನಿರ್ದೇಶಕ ಕೊಳ್ಳಿ ವಾಮದೇವ, ತಹಸೀಲ್ದಾರ್ ವಿ.ಕೆ.ನೇತ್ರಾವತಿ ಇತರರಿದ್ದರು.
- ಬರ ವೀಕ್ಷಣೆಗೆ ತೆರಳಿದ ಸಚಿವರ ಬಳಿ ರೈತರ ಅಳಲು
- ಬೆಳೆಹೋಯ್ತು ನಮ್ಮನ್ನಾದರೂ ರಕ್ಷಿಸಿ ಎಂದು ಕೋರಿಕೆ
ಮೈಮೇಲಿದ್ದ ಒಡವೆ ಅಡವಿಟ್ಟು ಬಿತ್ತಿದ್ವಿ ಸಾಹೇಬ್ರೆ.. ಮಳೆರಾಯ ಮುನಿದು ಬೆಳೆಯೆಲ್ಲ ಸೀದುಹೋಯ್ತು... ಮನೆ ಕಾಯೋಕೆ ದನಕರುಗಳಿಗೂ ಮೇವಿಲ್ಲ, ಹೊಟ್ಟೆಗೂ ಹಿಟ್ಟಿಲ್ಲ...ನೀವೇ ನಮ್ಮ ಕೈ ಹಿಡಿಯಬೇಕು... ಹೀಗೆಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಕೈ ಹಿಡಿದು ಗೋಗರೆದು ಕಣ್ಣೀರಿಟ್ಟಿದ್ದು ಬೇರಾರೂ ಅಲ್ಲ, ಮಳೆರಾಯನ ಕಣ್ಣಾಮುಚ್ಚಾಲೆ ಆಟಕ್ಕೆ ಸಿಲುಕಿ ಬದುಕನ್ನೇ ಪಣಕ್ಕಿಟ್ಟಿರುವ ವಿಜಯನಗರ ಜಿಲ್ಲೆಯ ರೈತರು.
ಶುಕ್ರವಾರ ಬರ ವೀಕ್ಷಣೆಗೆ ಬಂದಿದ್ದ ಸಚಿವರ ಬಳಿ ಬಗೆ ಬಗೆ ಅಳಲು ತೋಡಿಕೊಂಡ ರೈತರು, ಇಂದೋ ನಾಳೆಯೋ ಮಳೆ ಬಂದೀತು ಎಂದು ಮೈಮೇಲಿದ್ದ ಅಲ್ಪಸ್ವಲ್ಪ ಬಂಗಾರ, ಬೆಳ್ಳಿ ಒಡವೆಗಳನ್ನು ಅಡವಿದ್ದು, ಸಾಲ ಮಾಡಿ ಜಮೀನಿಗೆ ಹಾಕಿದ್ದೀವಿ. ಮುಂಗಾರು ಕೈಕೊಟ್ಟು ಜಿಲ್ಲಾದ್ಯಂತ ಭೀಕರ ಬರ ಆವರಿಸಿದೆ. ಬೆಳೆಯಂತೂ ಹೋಯ್ತು ನಮ್ಮನ್ನಾದರೂ ಉಳಿಸಿ. ಇಲ್ಲವೇ ವಿಷ ನೀಡಿ ಎಂದು ರೈತ ಮಹಿಳೆ ಶಾಂತಲಿಂಗಮ್ಮ ಸೇರಿದಂತೆ ನೂರಾರು ಕೃಷಿಕರು ಸಚಿವರ ಅಂಗಾಲಾಚಿ ಬೇಡಿಕೊಂಡ ದೃಶ್ಯ ನೆರೆದಿದ್ದವರ ಕಣ್ಣಂಚಲ್ಲಿ ನೀರು ತರಿಸಿತು.
ನಮ್ಮ ಕಷ್ಟಕ್ಕೆ ನೀವೇ ಆಸರೆ..
ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ರೈತ ಮಹಿಳೆ ಗೌಡ್ರು ಶಾಂತಲಿಂಗಮ್ಮ ಅವರ ಜಮೀನಿಗೆ ತೆರಳಿ ಒಣಗಿ ಹೋಗಿರುವ ಮುಸುಕಿನ ಜೋಳ ಹಾಗೂ ಸಜ್ಜೆ ಬೆಳೆಗಳನ್ನು ವೀಕ್ಷಿಸಿದರು. ಈ ವೇಳೆ ಸಚಿವರ ಕೈ ಹಿಡಿದು ಅಳಲು ತೋಡಿಕೊಂಡ ಶಾಂತಲಿಂಗಮ್ಮ, ಎಂದೂ ಕಾಣದ ಭೀಕರ ಬರ ಬಂದಿದೆ ಸ್ವಾಮಿ. ಮನೆಯಲ್ಲಿದ್ದ ರೊಕ್ಕವನ್ನೆಲ್ಲ ಹೊಲಕ್ಕೆ ಹಾಕಿದ್ದು ಮಳೆ ಇಲ್ಲದೆ ಬಿಡಿಗಾಸು ಬರದಂತಾಗಿದೆ. ನಮ್ಮ ಕಷ್ಟಕ್ಕೆ ನೀವೇ ಆಸರೆಯಾಗಬೇಕೆಂದು ಗೋಗರೆದರು.
ಮತ್ತೊಬ್ಬ ರೈತ ವೀರಣ್ಣ ಮಾತನಾಡಿ, ಕಳೆದ ಎರಡು ತಿಂಗಳಿಂದ ಮಳೆಯಿಲ್ಲದೆ ಬೆಳೆ ಮೊಟಕಾಗಿದೆ. ಸದ್ಯ ಮಳೆ ಬಂದರೂ ಕಾಳು ಕಟ್ಟುವುದಿಲ್ಲ, ದನ-ಕರುಗಳಿಗೂ ಮೇವು ಸಿಗುವುದಿಲ್ಲ. ಕೂಡಲೇ ಬೆಳೆ ಪರಿಹಾರ ನೀಡಿ ರೈತರ ಸಾಲ ಮನ್ನಾ ಮಾಡಬೇಕೆಂದು ಕೈಮುಗಿದು ಮನವಿ ಮಾಡಿದರು.
ಸ್ಥಳದಲ್ಲಿದ್ದ ಕೂಡ್ಲಿಗಿ ಶಾಸಕ ಡಾ.ಎಚ್.ಟಿ. ಶ್ರೀನಿವಾಸ್ ಮಾತನಾಡಿ, ಕೂಡ್ಲಿಗಿ ತಾಲೂಕಿನಲ್ಲಿ ಶೇ.80 ಬೆಳೆ ನಾಶವಾಗಿದೆ. ತಾಲೂಕನ್ನು ತಕ್ಷಣವೇ ಬರಪೀಡಿತ ಪಟ್ಟಿಗೆ ಸೇರಿಸಿ, ಕೃಷಿ-ಕೂಲಿ ಕಾರ್ಮಿಕರು ಗುಳೆ ಹೋಗುವುದನ್ನು ತಡೆಯಲು ಸರ್ಕಾರ ಯುದ್ಧೋಪಾದಿಯಲ್ಲಿ ಯೋಜನೆ ರೂಪಿಸಬೇಕೆಂದು ಸಚಿವರಲ್ಲಿ ವಿನಂತಿಸಿದರು. ಕೊಟ್ಟೂರು ತಾಲೂಕಿನ ಗಜಾಪುರ ಬಳಿಯೂ ಸಚಿವರು ಬೆಳೆ ಹಾನಿ ಪರಿಶೀಲನೆ ನಡೆಸಿದರು.
ರೈತರ ಗೋಳು ಆಲಿಸಿದ ಸಚಿವ ಜಮೀರ್ ಅಹಮ್ಮದ್ ಖಾನ್, ಯಾರೂ ಆತಂಕ ಪಡಬಾರದು ಎಂದು ಧೈರ್ಯ ತುಂಬಿದರು. ವಿಮೆ ಮಾಡಿಸಿದ ಹಾಗೂ ಮಾಡಿಸದ ರೈತರ ಪಟ್ಟಿಯನ್ನು ಶೀಘ್ರ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಜಿಲ್ಲೆಯನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು. ರೈತರಿಗೆ ಪರಿಹಾರ ಸೇರಿದಂತೆ ಸರ್ಕಾರದಿಂದ ಆಗಬೇಕಾದ ಎಲ್ಲ ನೆರವನ್ನು ಜರೂರಾಗಿ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.
ಕೃಷಿಕರ ಸಂಕಷ್ಟ ವರದಿ ಸಿಎಂಗೆ ಸಲ್ಲಿಕೆ
ಕೊಟ್ಟೂರು ತಾಲೂಕಿನ ಗಜಾಪುರದಲ್ಲಿ ಹಾಗೂ ಹರಪನಹಳ್ಳಿ ತಾಲೂಕಿನ ಪೃಥ್ವೇಶ್ವರದಲ್ಲಿ ಬರ ವೀಕ್ಷಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಮೀರ್ ಅವರು, ಜಿಲ್ಲೆಯ ಒಟ್ಟು 6 ತಾಲೂಕುಗಳ ವರದಿ ತಯಾರಿಸಲಾಗುವುದು. ಮಳೆ ಕೊರತೆಯಿಂದಾಗಿ ರೈತರು ಪ್ರತಿ ಎಕರೆಗೆ ಕನಿಷ್ಠ 15 ಸಾವಿರ ರೂ. ಖರ್ಚು ಮಾಡಿ ಬೆಳೆದ ಬೆಳೆಗಳು ನಾಶವಾಗಿವೆ. ಬೆಳೆ ವಿಮೆ ಮಾಡಿಸಿದ ಹಾಗೂ ವಿಮೆ ಮಾಡಿಸದ ರೈತರ ಪ್ರತ್ಯೇಕ ಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಳೆದ ವರ್ಷದ 100 ಕೋಟಿ ರೂ. ವಿಮೆ ಪೈಕಿ ಈಗಾಗಲೇ 64 ಕೋಟಿ ರೂ. ಬಿಡುಗಡೆಯಾಗಿದ್ದು, 34 ಕೋಟಿ ರೂ. ಬಾಕಿಯಿದೆ ಎಂದು ತಿಳಿಸಿದರು.
ಸಮೀಕ್ಷೆ ವರದಿ ಆಧಾರದ ಮೇಲೆ ಆ.15ರ ನಂತರ ಯಾವ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂಬುದನ್ನು ಮುಖ್ಯಮಂತ್ರಿ ಸೂಕ್ತ ತೀರ್ಮಾನ ಕೈಗೊಂಡು ಪರಿಹಾರ ಕ್ರಮಗಳನ್ನು ಪ್ರಕಟಿಸಲಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ಸಾಲ ಮರುಪಾವತಿಸುವಂತೆ ಬ್ಯಾಂಕ್‌ಗಳಿಂದ ನೋಟಿಸ್ ನೀಡುತ್ತಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಬಾರಿ ರೈತರಿಗೆ ಹಣ ಪಾವತಿಸಲು ಕಷ್ಟವಾಗುವುದರಿಂದ ಈ ಕುರಿತು ಸಿಎಂ ಜತೆ ಚರ್ಚಿಸಿ ನೋಟಿಸ್ ನೀಡುವುದನ್ನು ತಡೆಹಿಡಿಯಲಾಗುವುದು ಎಂದರು.
ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 69 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 80 ಟಿಎಂಸಿ ನೀರಿತ್ತು. ಈ ಬಾರಿ ಮಳೆ ಕೊರತೆಯಾಗಿದ್ದರೂ ಜಲಾಶಯದಿಂದ ಮೊದಲ ಆದ್ಯತೆಯಾಗಿ ಕುಡಿವ ನೀರು ಪೂರೈಸಲಾಗುವುದು. ಬೆಳೆಗೆ ಹರಿಸುವುದು ಕಷ್ಟ ಸಾಧ್ಯ. ಉತ್ತಮ ಮಳೆ ಬರಲೆಂದು ದೇವರಲ್ಲಿ ಬೇಡಿಕೊಳ್ಳೋಣ ಎಂದರು.