ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ನಗರಕ್ಕೆ ಕುಡಿವ ನೀರು ಪೂರೈಸುವ ಶಾಶ್ವತ ಯೋಜನೆ ಇನ್ನೂ ಮರೀಚಿಕೆಯಾಗಿದೆ. 1200 ಕೋಟಿ ರೂ. ವೆಚ್ಚದ ಈ ಯೋಜನೆಗೆ ಸಂಬಂಧಿಸಿದಂತೆ ಕೆಎಂಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಮಟ್ಟದ ಸಮಿತಿಯಿಂದ ಈವರೆಗೆ ಅನುಮೋದನೆ ದೊರೆತಿಲ್ಲ.
ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯಿಂದ ಬಳ್ಳಾರಿ ನಗರದಲ್ಲಿ ಮುಂಬರುವ ವರ್ಷಗಳಲ್ಲಿ ಹೆಚ್ಚಾಗುವ ಜನಸಂಖ್ಯೆ ಆಧರಿಸಿ ಪ್ರತಿದಿನ 150 ಎಂಎಲ್‌ಡಿಗೂ ಅಧಿಕ ನೀರು ಪೂರೈಸುವ ಯೋಜನೆ ಜಾರಿಗೆ ಉದ್ದೇಶಿಸಲಾಗಿದೆ. ಇದಕ್ಕಾಗಿ ತುಂಗಭದ್ರಾ ಜಲಾಶಯದಿಂದ ಕುಡಿವ ನೀರಿನ ಪೈಪ್‌ಗಳ ಅಳವಡಿಸಬೇಕಾಗಿದೆ. ಈ ಯೋಜನೆಗೆ ಕೆಎಂಆರ್‌ಸಿಯಿಂದ 1200 ಕೋಟಿ ರೂ. ಕೋರಿ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿದೆ.
ಕೆಎಂಆರ್‌ಸಿಗೆ ಪ್ರಸ್ತಾವನೆ ಸಲ್ಲಿಸುವ ಮುನ್ನ ಡಿಸಿ, ಜಿಪಂ ಸಿಇಒ, ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಇಂಜನಿಯರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಸೇರಿದಂತೆ ಒಟ್ಟು ಏಳು ಅಧಿಕಾರಿಗಳ ತಂಡದ ಜಿಲ್ಲಾ ಮಟ್ಟದ ಸಭೆಯಲ್ಲಿ ಅನುಮೋದನೆ ಸಿಗಬೇಕಿದೆ. ನಂತರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮೂಲಕ ಕೆಎಂಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಬೇಕಾಗಿದೆ.
ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಅನುದಾನದಲ್ಲಿ ತುಂಗಭದ್ರಾ ಜಲಾಶಯದಿಂದ ನಗರಕ್ಕೆ ಕುಡಿವ ನೀರು ಪೂರೈಸುವ ಯೋಜನೆಯ ಆಶ್ವಾಸನೆ ಬಿಟ್ಟರೆ ಯಾವುದೇ ಬೆಳವಣಿಗೆ ನಡೆದಿಲ್ಲ. ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆದು ಕೆಎಂಆರ್‌ಸಿ ಅನುದಾನ ನೀಡಿದರೂ ಕಾಮಗಾರಿ ಪೂರ್ಣಗೊಳಿಸಲು ಕನಿಷ್ಠ ಮೂರು ವರ್ಷ ಹಿಡಿಯಲಿದೆ. ಈ ಯೋಜನೆಯಿಂದ ತೋರಣಗಲ್, ಕುರೇಕುಪ್ಪ, ಬಳ್ಳಾರಿ ಗ್ರಾಮೀಣ ಸೇರಿದಂತೆ ನಾನಾ ಗ್ರಾಮಗಳಿಗೆ ಶಾಶ್ವತವಾಗಿ ಕುಡಿವ ನೀರು ಪೂರೈಕೆಯಾಗಲಿದೆ. ಆದರೆ, ಯೋಜನೆ ತ್ವರಿತವಾಗಿ ಅನುಷ್ಠಾನಗೊಳ್ಳಲಿದೆಯೇ ಎಂಬುದು ಅನುಮಾನವಾಗಿದೆ.
ನಗರಕ್ಕೆ ಕುಡಿವ ನೀರು ಪೂರೈಸಲು ಬಳ್ಳಾರಿ ಹೊರವಲಯದಲ್ಲಿ ಒಂದು ಹಾಗೂ ಮೋಕಾ ಗ್ರಾಮದ ಬಳಿ ಮೂರು ಕೆರೆಗಳಿವೆ. ಆದರೂ, ದಿನೇ ದಿನೆ ಕುಡಿವ ನೀರಿನ ಸಮಸ್ಯೆ ಎದುರಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ನಗರದಲ್ಲಿ 15 ದಿನಕ್ಕೊಮ್ಮೆ ಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲಾ ಕೇಂದ್ರದಿಂದ ಅನತಿ ದೂರದಲ್ಲಿ ತುಂಗಭದ್ರಾ ಜಲಾಶಯವಿದ್ದರೂ ಜೀವಜಲದ ಕೊರಗು ಜನರನ್ನು ಕಾಡುತ್ತಿದೆ. ಹೊಸಪೇಟೆಯ ನಗರಕ್ಕೆ 512 ಕೋಟಿ ರೂ. ವೆಚ್ಚದಲ್ಲಿ ಕುಡಿವ ನೀರಿನ ಸಂಪರ್ಕ ಕಲ್ಪಿಸುವ ಯೋಜನೆಗೆ ಕೆಎಂಆರ್‌ಸಿಯಿಂದ ಅನುಮೋದನೆ ಸಿಕ್ಕು ಕಾಮಗಾರಿ ಆರಂಭಿಕ ಹಂತದಲ್ಲಿದೆ. ಆದರೆ, ಬಳ್ಳಾರಿಗೆ ಕುಡಿವ ನೀರು ಪೂರೈಸುವ ಶಾಶ್ವತ ಯೋಜನೆ ಮಾತ್ರ ಇನ್ನೂ ಮರೀಚಿಕೆಯಾಗಿದೆ.
ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ ನಾನಾ ಇಲಾಖೆಗಳ ಹಲವು ಕಾಮಗಾರಿಗಳಿಗೆ ಜಿಲ್ಲಾ ಮಟ್ಟದ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಆದರೆ, ಶಾಶ್ವತ ಕುಡಿವ ನೀರಿನ ಯೋಜನೆ ಕೆಎಂಆರ್‌ಸಿಯ 1200 ಕೋಟಿ ರೂ. ವೆಚ್ಚದಲ್ಲಿ ನಡೆಯುವುದರಿಂದ ಲೋಪಗಳು, ಅವ್ಯವಹಾರ ಕಂಡು ಬಂದರೆ ಸುಪ್ರಿಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುದರ್ಶನರೆಡ್ಡಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಆದ್ದರಿಂದ, ಕಾಮಗಾರಿ ಪ್ರಕ್ರಿಯೆಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಡಿಸಿ ಸೂಚಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ, ಎರಡ್ಮೂರು ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದರೂ, ಪ್ರಸ್ತಾವನೆ ಇನ್ನೂ ಸಲ್ಲಿಕೆಯಾಗಿಲ್ಲ.
ಬಳ್ಳಾರಿ ನಗರಕ್ಕೆ ಶಾಶ್ವತ ಕುಡಿವ ನೀರು ಪೂರೈಸುವ ಯೋಜನೆಗೆ ಕೆಎಂಆರ್‌ಸಿದಿಂದ ಅನುದಾನ ಪಡೆಯಲಾಗುವುದು. ಕಾಮಗಾರಿಗೆ ಪೂರಕ ಪ್ರಕ್ರಿಯೆಗಳನ್ನು ಪರಿಶೀಲಿಸಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ನಾಗೇಂದ್ರ ಪ್ರಸಾದ್ ಕೆ. ಡಿಸಿ, ಬಳ್ಳಾರಿ