ಸಿರಗುಪ್ಪ ತಾಲೂಕಿನ ಚಿಕ್ಕಬಳ್ಳಾರಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಬಿಸಿಲಿನಿಂದ ಆರೋಗ್ಯ ರಕ್ಷಿಸಿಕೊಳ್ಳುವ ಕುರಿತು ಜಾಗೃತಿ ಕರಪತ್ರ ಪ್ರದರ್ಶಿಸಲಾಯಿತು.
ಸಿರಗುಪ್ಪ: ಬೇಸಿಗೆಯ ಬಿಸಿಲಿನಿಂದ ಆರೋಗ್ಯ ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಡಿಎಚ್‌ಒ ವೈ.ರಮೇಶ್ ಬಾಬು ಹೇಳಿದರು.
ಚಿಕ್ಕಬಳ್ಳಾರಿ ಗ್ರಾಮದಲ್ಲಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಿಂದ ಬಿಸಿಲಿನಿಂದ ಆರೋಗ್ಯ ರಕ್ಷಿಸಿಕೊಳ್ಳುವ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಬಿಸಿಲ ಶಾಖದಿಂದ ತಪ್ಪಿಸಿಕೊಳ್ಳಲು ಹೆಚ್ಚು ನೀರು ಕುಡಿಯಬೇಕು. ಬಾಯಾರಿಕೆಯಾಗದಿದ್ದರೂ ದಿನಕ್ಕೆ ಕನಿಷ್ಠ 3 ರಿಂದ 4 ಲೀ. ನೀರು ಕುಡಿಯುವುದು ಉತ್ತಮ. ಎಳನೀರು, ಮಜ್ಜಿಗೆ, ಮನೆಯಲ್ಲಿ ತಯಾರಿಸಿದ ಹಣ್ಣಿನ ರಸ ಅಥವಾ ಒಆರ್‌ಎಸ್ ದ್ರಾವಣಗಳನ್ನು ಬಳಸುವುದರಿಂದ ದೇಹದ ಜಲಸಂಯೋಜನೆಯನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲು ಹೆಚ್ಚಾಗಿರುವುದರಿಂದ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಒಂದು ವೇಳೆ ಹೋಗಲೇಬೇಕಿದ್ದರೆ ಛತ್ರಿ, ಟೋಪಿ ಅಥವಾ ಸನ್ ಗ್ಲಾಸ್ ಬಳಸುವಂತೆ ಸೂಚಿಸಿದರು. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸುವುದರಿಂದ ಶಾಖವನ್ನು ನಿಯಂತ್ರಿಸಬಹುದು ಎಂದರು.
ಮಕ್ಕಳು ಮತ್ತು ವೃದ್ಧರು ಸತತವಾಗಿ ನೀರು ಕುಡಿಯುವಂತೆ ಗಮನಹರಿಸಬೇಕು. ವಿಪರೀತ ಸುಸ್ತು, ತಲೆನೋವು ಅಥವಾ ವಾಂತಿಯಂತಹ ಲಕ್ಷಣಗಳು ಕಂಡುಬಂದರೆ ಕೂಡಲೇ ಹತ್ತಿರದ ವೈದ್ಯರನ್ನು ಸಂಪರ್ಕಿಸಬೇಕು ಅಥವಾ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವಂತೆ ಡಿಎಚ್‌ಒ ಸಲಹೆ ನೀಡಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ.ವಿರೂಪಾಕ್ಷಪ್ಪ, ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಎಲ್ಲಪ್ಪ ಇನಾಮದಾರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ.ರವಿಕುಮಾರ್, ಎಚ್.ಲಿಂಗರಾಜ್, ಕೆ.ಎಂ.ರಾಚೋಟಯ್ಯ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಮಹಾಲಕ್ಷ್ಮೀ ಇದ್ದರು.