ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಆಯೋಜಿಸಿದ್ದ 10 ದಿನಗಳ ರಾಷ್ಟ್ರೀಯ ರಂಗಭೂಮಿ ಕಾರ್ಯಾಗಾರವನ್ನು ರಂಗಭೂಮಿ ನಿರ್ದೇಶಕ ಡಾ.ಸಿ.ಬಸವಲಿಂಗಯ್ಯ ಉದ್ಘಾಟಿಸಿದರು. ವಿವಿ ಕುಲಪತಿ ಪ್ರೊ.ಎಂ.ಮುನಿರಾಜು, ಸಂಪಾದಕ ರವೀಂದ್ರ ಭಟ್ಟ, ಪ್ರೊ.ಶಾಂತಾನಾಯ್ಕ, ಕುಲಸಚಿವ ಪ್ರೊ.ವಿ.ಲೋಕೇಶ್, ಅತಿಥಿ ಉಪನ್ಯಾಸಕ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಇತರರಿದ್ದರು.
- ಮನಗೆಲ್ಲುವುದೇ ನಾಟಕಗಳ ಜೀವಾಳ
- ಎಲ್ಲ ಪ್ರಹಸನಗಳಿಗೂ ಪುರಾವೆ
ಬಳ್ಳಾರಿ : ನಾಟಕಗಳ ಪಾತ್ರಗಳು ಮಾನವನ ಭಾವನೆಗಳೊಂದಿಗಿನ ಆಟವಾಗಿವೆ ಎಂದು ಮೈಸೂರಿನ ರಂಗಭೂಮಿ ನಿರ್ದೇಶಕ ಡಾ.ಸಿ.ಬಸವಲಿಂಗಯ್ಯ ಹೇಳಿದರು. ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ದಿ. ಶ್ರೀಮತಿ ರಮಣಿಕ ಗುಪ್ತ ಅವರ ಸ್ಮರಣಾರ್ಥ ಆಯೋಜಿಸಿದ್ದ 10 ದಿನಗಳ ರಾಷ್ಟ್ರೀಯ ರಂಗಭೂಮಿ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೃಜನಶೀಲವಾದ ಸುಳ್ಳುಗಳ ಮೂಲಕ ಪಾತ್ರಗಳಿಗೆ ಜೀವ ತುಂಬಿ ಮನೋಜ್ಞವಾಗಿ ಅಭಿನಯಿಸಿ ಮನಗೆಲ್ಲುವುದೇ ನಾಟಕಗಳ ಜೀವಾಳವಾಗಿದೆ ಎಂದು ಅಭಿಪ್ರಾಯಪಟ್ಟರು. ನಾಟಕಗಳು ಸುರ ಮತ್ತು ಅಸುರರ ನಡುವಿನ ಕಾದಾಟದಂತಿರುತ್ತವೆ. ಪ್ರತಿ ಕಲಾವಿದನು ಪರ್ಸನಾಲಿಟಿ, ಪಿಚ್ಚರ್, ಅಭಿನಯಗಳ ಮೂಲಕ ಚಲನವಲನ, ಮಾತುಗಾರಿಕೆ ಹಾಗೂ ನಟನೆಯ ಮೂಲಕ ಪ್ರೇಕ್ಷಕರ ಮನ ಗೆಲ್ಲುಬೇಕು. ಮನುಷ್ಯನಲ್ಲಿ ಮಾನವೀಯ ತುಡಿತ ಹಾಗೂ ತಮ್ಮದೇ ಪ್ರತಿಬಿಂಬ ತೋರಿಸಿಕೊಡುವುದೇ ನಾಟಕ ಕಲೆಯ ವೈಶಿಷ್ಟೃ ಎಂದು ಹೇಳಿದರು.
ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮಾತನಾಡಿ, ಪತ್ರಕರ್ತರೇ ನಿಜವಾದ ಪ್ರೇಕ್ಷಕರಂತಿದ್ದು, ಜಗತ್ತಿನಲ್ಲಿ ನಡೆಯುವ ಎಲ್ಲ ಪ್ರಹಸನಗಳಿಗೂ ಪುರಾವೆಯಾಗಿರುತ್ತಾರೆ. ನಾಡಿನಲ್ಲಿ ನಡೆಯುವ, ನಡೆಯುತ್ತಿರುವ ಚಳುವಳಿಗಳಿಗೆ ಶಕ್ತಿ ಕೊಟ್ಟಿದ್ದೆ ರಂಗಭೂಮಿ ಆದರೆ ಇತ್ತೀಚಿನ ದಿನಗಳಲ್ಲಿ ಭೂಮಿಗೆ ತಲೆದೋರಿರುವ ನೈಸರ್ಗಿಕ ಸಮಸ್ಯೆಗಳಂತೆ ರಂಗಭೂಮಿ ಕ್ಷೇತ್ರಕ್ಕೂ ಸಂಕಷ್ಟ ಎದುರಾಗಿದೆ ಎಂದರು.
ಸ್ವಾತಂತ್ರೃ ಪೂರ್ವದಿಂದಲೂ ಚಳುವಳಿಗಳ ಸಂಘಟನೆಗೆ ನಾಟಕಗಳು ಮಾಧ್ಯಮವಾಗಿದ್ದವು. ಇಂದಿನ ಪೀಳಿಗೆಯು ಮೊಬೈಲ್, ಟಿವಿ ಗೀಳಿನಿಂದಾಗಿ ಕಲ್ಪನಾಶಕ್ತಿಯೇ ಇಲ್ಲಂದಂತಾಗಿದೆ. ಹೊಸ ಚಿಂತನೆಗಳಿಗೆ ಈ ಶಿಬಿರವು ನಾಂದಿ ಹಾಡಲಿ ಎಂದರು.
ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ. ಮುನಿರಾಜು ಮಾತನಾಡಿ, ವಿವಿಧ ರಿಯಾಲಿಟಿ ಶೋಗಳ ಮೂಲಕ ನಾಡಿನ ಅನೇಕ ಪ್ರತಿಭೆಗಳನ್ನು ಟಿ.ವಿ ಚಾನೆಲ್‌ಗಳು ಹೊರತಂದಿವೆ. ನಾಟಕ ರೂಪಿಸುವ ಸಂಪೂರ್ಣ ಜವಾಬ್ದಾರಿ ಒಬ್ಬ ನಿರ್ದೇಶಕನ ಮೇಲಿರುತ್ತದೆ. ಪ್ರದರ್ಶನ ಕಲೆ ಮತ್ತು ನಾಟಕ ವಿಭಾಗಕ್ಕೆ ಧನಸಹಾಯ ಮಾಡಿರುವ ದಿ. ರಮಣಿಕ ಗುಪ್ತ ಅವರ ಹೆಸರಲ್ಲಿ ಚಿನ್ನದ ಪದಕ ನೀಡುವಲ್ಲಿ ಚಿಂತನೆ ನಡೆಸಬೇಕು.
ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಫಿಲ್ಮ್ ಇನ್ಸಿಟ್ಯೂಟ್ ನಿರ್ಮಿಸಲು ಸರ್ಕಾರದೊಂದಿಗೆ ಮಾತುಕತೆ ನಡೆದಿದೆ ಎಂದು ಹೇಳಿದರು. ನಾಟಕ ನಿರ್ದೇಶನ, ಜನಪದ ರಂಗ, ರಂಗಭೂಮಿ ಮತ್ತು ರಂಗಶಿಕ್ಷಣ, ಬಯಲಾಟ ಮೊದಲಾದ ಮಾದರಿಯ ಹತ್ತಕ್ಕೂ ಹೆಚ್ಚು ವಿವಿಧ ಕಾರ್ಯಾಗಾರಗಳು 10 ದಿನಗಳ ಕಾಲ ನಡೆಯಲಿವೆ. 250ಕ್ಕೂ ಅಧಿಕ ಶಿಬಿರಾರ್ಥಿಗಳು ಕಾರ್ಯಾಗಾರಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.