ದೇವಸಮುದ್ರ ಕ್ರಾಸ್‌ನಲ್ಲಿರುವ ಗೋ ಶಾಲೆ ಉದ್ಘಾಟನೆ ಇಷ್ಟಾರ್ಥಸಿದ್ಧಿ ಯಾಗದಲ್ಲಿ ಸಂಸದ ಈ.ತುಕರಾಮ್ ಪಾಲ್ಗೊಂಡಿದ್ದರು. ಪ್ರಮುಖರಾದ ಕೆ.ಎಂ.ಬಸವರಾಜಶಾಸ್ತ್ರಿ, ಪಿ.ಮೂಕಯ್ಯಸ್ವಾಮಿ, ಎಂ.ಸುಧೀರ್, ಹೊನ್ನಳ್ಳಿ ಗಂಗಾಧರ ಇತರರಿದ್ದರು.
ಕಂಪ್ಲಿ: ಅಖಂಡ ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿ 2372 ಕೋಟಿ ರೂ. ವೆಚ್ಚದಲ್ಲಿ ಎರಡು ರೈಲು ಮಾರ್ಗ ನಿರ್ಮಾಣಗೊಳ್ಳಲಿವೆ. ಗಂಗಾವತಿಯಿಂದ ಕಂಪ್ಲಿ ಮಾರ್ಗವಾಗಿ ದರೋಜಿವರೆಗೆ ರೈಲು ಮಾರ್ಗ ನಿರ್ಮಾಣಕ್ಕೆ ಅನುದಾನ ಪಡೆಯಲಾಗುವುದು ಎಂದು ಸಂಸದ ಈ.ತುಕರಾಮ್ ಹೇಳಿದರು.
ಪಟ್ಟಣದ ದೇವಸಮುದ್ರ ಕ್ರಾಸ್ ಬಳಿ ಗೋಶಾಲೆ ಉದ್ಘಾಟನೆ ಇಷ್ಟಾರ್ಥ ಸಿದ್ಧಿ ಹೋಮ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾನುವಾರ ಮಾತನಾಡಿದರು. ತೋರಣಗಲ್ಲು, ಪಾಪಿನಾಯಕನಹಳ್ಳಿ, ಕುಡುತಿನಿ ರೈಲು ನಿಲ್ಧಾಣಗಳನ್ನು ಅಭಿವೃದ್ಧಿಗೊಳಿಸಲಾಗುವುದು. ಸಂಸದರ ಐದು ಕೋಟಿ ಅನುದಾನವನ್ನು ಕಂಪ್ಲಿ ಸೇರಿದಂತೆ ಎಂಟು ಕ್ಷೇತ್ರಗಳಿಗೆ ವಿತರಿಸಲಾಗಿದೆ ಎಂದರು.
ಅಗತ್ಯಬಿದ್ದಲ್ಲಿ ಸಿಎಸ್‌ಆರ್ ಅನುದಾನದಡಿ ಗೋಶಾಲೆಗೆ ಸಹಾಯಧನ ಒದಗಿಸಲಾಗುವುದು. ಕೃಷಿಯೊಂದಿಗೆ ಜಾನುವಾರು ಸಾಕಣೆ ಮುಂದುವರಿಸಬೇಕು. ಗೋವುಗಳ ಒಡನಾಟದಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಗೋಶಾಲೆ ಸಂಸ್ಥಾಪಕ ಕೆ.ಎಂ.ಬಸವರಾಜಶಾಸ್ತ್ರಿ, ಪ್ರಮುಖರಾದ ಪಿ.ಮೂಕಯ್ಯಸ್ವಾಮಿ, ಎಂ.ಸುಧೀರ್, ಹೊನ್ನಳ್ಳಿ ಗಂಗಾಧರ, ಎಚ್.ಹನುಮಂತಪ್ಪ, ಕೆ.ಬಸವರಾಜ, ಅಕ್ಕಿ ಜಿಲಾನ್, ಬಿ.ನಾರಾಯಣಪ್ಪ ಇತರರಿದ್ದರು.