ಸಂಡೂರು ತಾಲೂಕಿನ ನರಸಾಪುರದಲ್ಲಿ ಎಐಯುಟಿಯುಸಿ, ಸಂಯುಕ್ತ ಗಣಿ ಕಾರ್ಮಿಕರ ಸಂಘದಿಂದ ಕಾರ್ಮಿಕ ದಿನ ಆಚರಿಸಲಾಯಿತು.
ಸಂಡೂರು: ಕಾರ್ಮಿಕರ ದಿನಾಚರಣೆ ಅಂಗವಾಗಿ ಎಐಯುಟಿಯುಸಿ, ಸಂಯುಕ್ತ ಗಣಿ ಕಾರ್ಮಿಕರ ಸಂಘದ ವತಿಯಿಂದ ಎನ್‌ಎಂಡಿಸಿಯಿಂದ ನರಸಾಪುರವರೆಗೆ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿತ್ತು. ಬಳಿಕ ನರಸಾಪುರದ ಕಲ್ಯಾಣ ಮಂದಿರದಲ್ಲಿ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷ ಸೋಮಶೇಖರ ಗೌಡ ಮಾತನಾಡಿ, ಜಗತ್ತಿನಾದ್ಯಂತ ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟಿನಿಂದ ನಿರುದ್ಯೋಗ ಹೆಚ್ಚಿದೆ. ಲಕ್ಷಾಂತರ ಕಾರ್ಮಿಕರನ್ನು ಕೆಲಸದಿಂದ ತೆಗೆಯಲಾಗುತ್ತಿದೆ. ಕಾರ್ಮಿಕರನ್ನು ಜೀತದಾಳುಗಳಂತೆ ಕಾಣಲಾಗುತ್ತಿದ್ದು, ಆತ್ಯಂತ ಕಡಿಮೆ ವೇತನಕ್ಕೆ 12ರಿಂದ 14 ಗಂಟೆ ದುಡಿಸಿಕೊಳ್ಳಲಾಗುತ್ತಿದೆ ಎಂದರು.
ಕಾರ್ಮಿಕರ ಪರ ನಿಲ್ಲಬೇಕಾದ ಸರ್ಕಾರಗಳು ಬಂಡವಾಳಶಾಹಿಗಳ ಏಜೆಂಟ್‌ಗಳಂತೆ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರ 29 ಕಾರ್ಮಿಕ ಪರ ಕಾನೂನುಗಳನ್ನು ತಿದ್ದುಪಡಿ ಮಾಡಿ ಕಾರ್ಪೋರೇಟ್ ಕಂಪನಿಗಳ ಹಿತಕ್ಕಾಗಿ 4 ಲೇಬರ್ ಕೋಡ್‌ಗಳನ್ನು ಜಾರಿಗೆ ತರುತ್ತಿದೆ. ಹೋರಾಟದಿಂದ ಗಳಿಸಿಕೊಂಡ ಎಲ್ಲ ಹಕ್ಕುಗಳನ್ನು ಹೊಸಕಿ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ದೂರಿದರು.
ಎಂಟು ತಾಸು ದುಡಿಮೆಗಾಗಿ ನಡೆದ ಮೇ ದಿನದ ಹೋರಾಟ, ತ್ಯಾಗ-ಬಲಿದಾನಗಳನ್ನು ಮತ್ತೆ ನೆನೆಯಬೇಕಿದೆ. ಮುಂದೆ ಬಂಡವಾಳಶಾಹಿ ವ್ಯವಸ್ಥೆಗೆ ಕೊನೆ ಹಾಡಿ ಕಾರ್ಮಿಕರು ಅಧಿಕಾರದ ಚುಕ್ಕಾಣಿ ಹಿಡಿಯುವ ಸಮಾಜವಾದಿ ವ್ಯವಸ್ಥೆಗೆ ನಾಂದಿ ಹಾಡಬೇಕು. ಇದು ಮೇ ದಿನ ಹೋರಾಟದ ಹುತಾತ್ಮರಿಗೆ ನಾವು ಸಲ್ಲಿಸುವ ಗೌರವವಾಗಿದೆ ಎಂದರು.
ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಎನ್.ಪ್ರಮೋದ್, ಸಂಯುಕ್ತ ಗಣಿ ಕಾರ್ಮಿಕ ಸಂಘದ ಹುಲಿಗೇಶ್, ಪ್ರಮುಖರಾದ ತಿಮ್ಮಣ್ಣ, ಅವಿನಾಶ್, ಬಸವರಾಜ್, ಸಂತೋಷ್, ರಾಜಪ್ಪ, ಬಸವರಾಜ್, ಆಯೂಬ್, ಮಂಜುನಾಥ್ ಇದ್ದರು.