ದೇವದುರ್ಗ ಪುರಸಭೆ ಕಚೇರಿಯಲ್ಲಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ವೈದ್ಯಾಧಿಕಾರಿಗಳಾದ ಪ್ರವೀಣ್ ಕುಮಾರ್, ಆನಂದ, ಸಂಗಮ್ಮ, ತ್ಯಾಗರಾಜ, ಕ್ಷಯರೋಗ ಮೇಲ್ವಿಚಾರಕ ರವಿಶಂಕರ ಶುಕ್ಲಾ, ನೌಕರರಾದ ಸೋಮಪ್ಪ, ಚನ್ನಬಸಯ್ಯ ಹಿರೇಮಠ ಇತರರಿದ್ದರು.
ದೇವದುರ್ಗ: ಕಾರ್ಮಿಕರು ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಟಿಎಚ್‌ಒ ಬನದೇಶ್ವರ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಹಾಗೂ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ತಂಬಾಕು, ಗುಟ್ಖಾ, ಮದ್ಯಪಾನ, ಧೂಮಪಾನ, ಡ್ರಗ್ಸ್, ಗಾಂಜಾ ಸೇವನೆ ಅತ್ಯಂತ ಅಪಾಯಕಾರಿ. ಫ್ಯಾಷನ್ ಹೆಸರಿನಲ್ಲಿ, ಒತ್ತಡ ನಿವಾರಿಸಲು, ದಣಿವು ತಣಿಸುವ ನೆಪದಲ್ಲಿ ದುಶ್ಚಟಗಳಿಗೆ ದಾಸರಾಗುವುದು ಸರಿಯಲ್ಲ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದರು.
ಪೌರ ಕಾರ್ಮಿಕರು ಆರೋಗ್ಯದ ಕಡೆ ವಿಶೇಷ ಕಾಳಜಿವಹಿಸಬೇಕು. ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು. ಸಣ್ಣಪುಟ್ಟ ರೋಗ ಲಕ್ಷಣಗಳು ಕಂಡುಬಂದರೆ ಚಿಕಿತ್ಸೆ ಪಡೆಯಬೇಕು. ಕ್ಷಯ ನಿರ್ಮೂಲನೆಗೆ ಸರ್ಕಾರ ವಿವಿಧ ಯೋಜನೆ ರೂಪಿಸಿದೆ.
ರೋಗಿಗಳು ಯೋಜನೆ ಸದ್ಬಳಕೆ ಮಾಡಿಕೊಂಡು ರೋಗ ಹೋಗಲಾಡಿಸಲು ಸಹಕಾರ ನೀಡಬೇಕು. ಸ್ವಚ್ಛತೆ ಕಾಪಾಡಿಕೊಂಡು ಸೊಳ್ಳೆಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು. ನೌಕರರಾದ ಗೀತಮ್ಮ, ಶಾರೋನ್, ಬಲವಂತ್, ವಿಶ್ವನಾಥ್, ನಂದಕುಮಾರ, ಲಕ್ಷ್ಮಣ, ಮಲ್ಲಿಕಾರ್ಜುನ, ಮಂಜುನಾಥ, ರಾಘವೇಂದ್ರಗೌಡ, ಹೇಮಾ, ರಾಜು, ಮನೋಜ್ ಇತರರಿದ್ದರು.