ಲಿಂಕ್ ರಸಗೊಬ್ಬರ ಮಾರಾಟ ವಿರೋಧಿಸಿ ಎಮ್ಮಿಗನೂರಿನಲ್ಲಿ ರಸಗೊಬ್ಬರ ವ್ಯಾಪಾರಿಯೊಂದಿಗೆ ರೈತಸಂಘದ ಪದಾಧಿಕಾರಿಗಳು ವಾಗ್ವಾದ ನಡೆಸಿದರು.
ಕಂಪ್ಲಿ: ರೈತರಿಗೆ ಲಿಂಕ್ ರಸಗೊಬ್ಬರ ಖರೀದಿಗೆ ಮಾರಾಟಗಾರ ಒತ್ತಾಯಿಸಿದ್ದಾರೆ ಎಂದು ಆರೋಪಿಸಿ, ರೈತಸಂಘದ ಪದಾಧಿಕಾರಿಗಳು ಎಮ್ಮಿಗನೂರಿನಲ್ಲಿ ರಸಗೊಬ್ಬರ ಅಂಗಡಿ ಮಾಲೀಕನೊಂದಿಗೆ ಬುಧವಾರ ವಾಗ್ವಾದ ನಡೆಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ವಿ.ವೀರೇಶ್ ಮಾತನಾಡಿ, ಲಿಂಕ್ ರಸಗೊಬ್ಬರ ಮಾರಾಟಕ್ಕೆ ಒತ್ತಾಯಿಸುವ, ಹೆಚ್ಚಿನ ಧರಕ್ಕೆ ರಸಗೊಬ್ಬರ ಮಾರಾಟ ಮಾಡುವ ವ್ಯಾಪಾರಿಗಳ ವಿರುದ್ಧ ಅಧಿಕಾರಿಗಳು ಕ್ರಮವಹಿಸಬೇಕು. ರೈತ ವೀರಾರೆಡ್ಡಿಗೆ ಲಿಂಕ್ ರಸಗೊಬ್ಬರ ಖರೀದಿಸುವಂತೆ ಒತ್ತಾಯಿಸಿದ್ದಲ್ಲದೆ, ಅಧಿಕಾರಿಗಳನ್ನು ವ್ಯಾಪಾರಿ ಅವಾಚ್ಯವಾಗಿ ನಿಂದಿಸಿದ್ದಾರೆ. ಈ ವ್ಯಾಪಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂಗಡಿ ಮಾಲೀಕರು ಲಿಂಕ್ ರಸಗೊಬ್ಬರ ನೀಡಲು ಮುಂದಾದರೆ ಒಪ್ಪಬಾರದು ಎಂದು ಆಗ್ರಹಿಸಿದರು.
ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ರೈತರು ಸಂಘಟಿತರಾಗಿ ಲಿಂಕ್ ರಸಗೊಬ್ಬರ ವಿರೋಧಿಸಬೇಕು. ಕೃಷಿ ಅಧಿಕಾರಿಗಳು ಕೃಷಿ ಪರಿಕರಗಳ ತಪಾಸಣೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಸಗೊಬ್ಬರ ವ್ಯಾಪಾರಿ ರಾಮಕೃಷ್ಣ ರಾಜು ಮಾತನಾಡಿ, ರೈತರ ಮನವೊಲಿಸಿ ಲಿಂಕ್ ರಸಗೊಬ್ಬರ ಮಾರಾಟ ಮಾಡುತ್ತೇವೆ ಹೊರತು ಒತ್ತಾಯಿಸಿಲ್ಲ ಎಂದರು. ರೈತ ಸಂಘದ ನಗರ ಅಧ್ಯಕ್ಷ ಕೊಟ್ಟೂರು ರಮೇಶ, ರೈತರಾದ ಕಾಗೆ ಈರಣ್ಣ, ಗುರು, ಯರ‌್ರಿಸ್ವಾಮಿ, ಮಂಜುನಾಥ, ತಿಪ್ಪಣ್ಣ, ಸಣ್ಣ ಜಡೆಪ್ಪ, ಶರಣಬಸಪ್ಪ, ಏಳುಬೆಂಚಿ ಶರಣಬಸವರಾಜ ಇತರರಿದ್ದರು.