ಕುರುಗೋಡಿನ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ರಥೋತ್ಸವಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಯಿತು. ಶಾಸಕ ಜೆ.ಎನ್. ಗಣೇಶ್, ತಹಸೀಲ್ದಾರ್ ನರಸಪ್ಪ, ಪುರಸಭೆ ಅಧ್ಯಕ್ಷ ಟಿ.ಶೇಕಣ್ಣ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಾನಾಳು ಆನಂದ, ಸಿಪಿಐ, ಬಾಳನಗೌಡ ಎಸ್.ಮಾನಶೆಟ್ಟಿ, ಪಿಎಸ್‌ಐ ಸುಪ್ರಿತ್ ವಿರೂಪಾಕ್ಷಪ್ಪ, ಪುರಸಭೆ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಇದ್ದರು.
ಕುರುಗೋಡು: ಪಟ್ಟಣದಲ್ಲಿ ದೊಡ್ಡಬಸವೇಶ್ವರ ರಥೋತ್ಸವವನ್ನು ಮಾ.3ರಂದು ಚಂದ್ರಗ್ರಹಣ ಹಿನ್ನೆಲೆಯಲ್ಲಿ ಮಧ್ಯಾಹ್ನವೇ ಜರುಗಿಸಲು ತೀರ್ಮಾನಿಸಲಾಗಿದೆ ಎಂದು ದೇವಸ್ಥಾನದ ಇಒ ಹನುಮಂತಪ್ಪ ಹೇಳಿದರು.
ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ಆಯೋಜಿಸಿದ್ದ ರಥೋತ್ಸವ ಪೂರ್ವಭಾವಿ ಸಭೆಯಲ್ಲಿ ಸೋಮವಾರ ಮಾತನಾಡಿದರು. ಸಾರ್ವಜನಿಕರಿಗೆ ಮಾಹಿತಿ ನೀಡದೆ ಏಕಪಕ್ಷೀಯವಾಗಿ ಸಂಜೆ ಬದಲು ಮಧ್ಯಾಹ್ನ ರಥ ಎಳೆಯಲು ಆಡಳಿತಾಧಿಕಾರಿ ಮತ್ತು ಆಡಳಿತ ಮಂಡಳಿ ಸದಸ್ಯರು ತೀರ್ಮಾನಿಸಿರುವ ಬಗ್ಗೆ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.
ಅನೇಕರು ಏರು ಧ್ವನಿಯಲ್ಲಿ ನಿರ್ಣಯದ ಬಗ್ಗೆ ಅಸಮಾಧಾನ ಹೊರಹಾಕಿದರು. ಇದರಿಂದ ಕೆಲವೊತ್ತು ಸಭೆಯಲ್ಲಿ ಗೊಂದಲ ಉಂಟಾಯಿತು. ಸಿಪಿಐ ಬಾಳನಗೌಡ ಎಸ್.ಮಾನಶೆಟ್ಟಿ ಹಾಗೂ ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ ಸಮಾಧಾನದಿಂದ ಅಭಿಪ್ರಾಯ ವ್ಯಕ್ತಪಡಿಸುವಂತೆ ಸೂಚಿಸಿದರು. ಇಒ ಹನುಮಂತಪ್ಪ ಮಾತನಾಡಿ, ಮಧ್ಯಾಹ್ನ 3ಕ್ಕೆ ಗ್ರಹಣ ಸ್ಪರ್ಶವಾಗಿ ಸಂಜೆ 6ಕ್ಕೆ ಮೋಕ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿ ಮಧ್ಯಾಹ್ನವೇ ರಥೋತ್ಸವಕ್ಕೆ ತೀರ್ಮಾನಿಸಿದೆ ಎಂದು ತಿಳಿಸಿದಾಗ ಸಾರ್ವಜನಿಕರು ಸಮ್ಮತಿಸಿದರು.
ಅಗ್ನಿಶಾಮಕ ವಾಹನ, ಆಂಬುಲೆನ್ಸ್ ಜತೆಗೆ ಭಕ್ತರಿಗೆ ಕುಡಿವ ನೀರು, ಸಮರ್ಪಕ ಸಾರಿಗೆ ವ್ಯವಸ್ಥೆ, ಪೊಲೀಸ್ ಭದ್ರತೆ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ನರಸಪ್ಪ ಸೂಚಿಸಿದರು.