ಬಳ್ಳಾರಿಯ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ವೈದಾಧಿಕಾರಿಗಳ ಜಿಲ್ಲಾಮಟ್ಟದ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಕಲಬುರಗಿ ವಿಭಾಗದ ಸಹ ನಿರ್ದೇಶಕ ಡಾ.ಶಂಕ್ರಪ್ಪ ಮೈಲಾರಿ, ಡಿಎಚ್‌ಒ ಡಾ.ವೈ.ರಮೇಶಬಾಬು, ಜಿಲ್ಲಾ ಆರ್‌ಸಿಎಚ್. ಅಧಿಕಾರಿ ಡಾ.ಹನುಮಂತಪ್ಪ ಇದ್ದರು.
- ಹೊರಗಿನ ಔಷಧಿಗಳನ್ನು ಬರೆದುಕೊಡಬಾರದು
- ಗರ್ಭಿಣಿಯರನ್ನು ಆರಂಭದಲ್ಲೇ ಪತ್ತೆ ಹಚ್ಚಿ
ಬಳ್ಳಾರಿ : ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸಿದ ರೋಗಿಗಳಿಗೆ ಹೊರಗಿನ ಔಷಧಿಗಳನ್ನು ಬರೆದುಕೊಡಬಾರದು ಎಂದು ಕಲಬುರಗಿ ವಿಭಾಗದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಹ ನಿರ್ದೇಶಕ ಡಾ.ಶಂಕ್ರಪ್ಪ ಮೈಲಾರಿ ಹೇಳಿದರು.
ನಗರದ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ವೈದಾಧಿಕಾರಿಗಳ ಜಿಲ್ಲಾಮಟ್ಟದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಖಾಸಗಿ ಆಸ್ಪತ್ರೆ ಅಥವಾ ಲ್ಯಾಬ್‌ಗಳಿಗೆ ರೋಗಿಗಳನ್ನು ಶಿಫಾರಸ್ಸು ಮಾಡುವುದು ಸಂಪೂರ್ಣವಾಗಿ ನಿಷೇಧಿಸಬೇಕು. ಆಸ್ಪತ್ರೆಗೆ ಅಗತ್ಯವಿರುವ ಔಷಧಿಗಳನ್ನು ಮುಂಚಿತವಾಗಿಯೇ ದಾಸ್ತಾನು ಮಾಡಿಕೊಳ್ಳಬೇಕು. ಆಸ್ಪತ್ರೆಯ ಒಳಗೆ ಮತ್ತು ಹೊರಗಡೆ ಸ್ವಚ್ಛತೆಯನ್ನು ಕಾಪಾಡಲು ಮೇಲ್ವಿಚಾರಣಾ ಸಿಬ್ಬಂದಿ ಪ್ರತಿದಿನ ಗಮನ ಹರಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಸುರಕ್ಷಿತ ಹೆರಿಗೆಗಳನ್ನು ಹೆಚ್ಚಿಸಲು ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲೇ ಹೆಚ್ಚಿನ ಹೆರಿಗೆಗಳನ್ನು ನಿರ್ವಹಿಸಬೇಕು. ಗರ್ಭಿಣಿಯರ ವಿವರಗಳನ್ನು ಮೊದಲ ಮೂರು ತಿಂಗಳ ಒಳಗಾಗಿಯೇ ಕಡ್ಡಾಯವಾಗಿ ದಾಖಲಿಸಿ, ನಿಯಮಿತ ತಪಾಸಣೆ ನಡೆಸಬೇಕು. ಇದರಿಂದ ತೊಡಕಿನ ಗರ್ಭಿಣಿಯರನ್ನು ಆರಂಭದಲ್ಲೇ ಪತ್ತೆ ಹಚ್ಚಿ, ರಕ್ತಹೀನತೆ ನಿವಾರಿಸಿ ತಾಯಿ, ಶಿಶು ಮರಣಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.
ಡಿಎಚ್‌ಒ ಡಾ.ವೈ.ರಮೇಶಬಾಬು ಮಾತನಾಡಿ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಆಸ್ಪತ್ರೆಗಳಲ್ಲಿರುವ ಟಿವಿಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಪ್ರಸ್ತುತ ಮಳೆಗಾಲ ಆರಂಭವಾಗಿರುವುದರಿಂದ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಲು ಕ್ಷೇತ್ರ ಮಟ್ಟದಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನಾಯಿ ಹಾಗೂ ಹಾವಿನ ಕಡಿತದ ಕುರಿತು ಗ್ರಾಪಂ, ಶಾಲೆಗಳು ಮತ್ತು ಸಮುದಾಯ ಸಭೆಗಳ ಮೂಲಕ ನಿರಂತರವಾಗಿ ಜಾಗೃತಿ ಮೂಡಿಸಬೇಕು ಎಂದು ನಿರ್ದೇಶಿಸಿದರು.