ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಎಸ್‌ಐಆರ್ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಎಂಎಲ್ಸಿ ವೈ.ಎಂ.ಸತೀಶ್, ಶಾಸಕ ಜಿ.ಜನಾರ್ದನರೆಡ್ಡಿ, ಮಾಜಿ ಶಾಸಕ ಬಿ.ಶ್ರೀರಾಮುಲು, ಮುಖಂಡರಾದ ಅರುಣಾ ಲಕ್ಷ್ಮೀ, ಕೆ.ಎಸ್.ದಿವಾಕರ್, ಸುರೇಶಬಾಬು ಇತರರಿದ್ದರು. 
ಬಳ್ಳಾರಿ

ಡಿಕೆ ಸಿಎಂ ರಾಜ್ಯದ ಜನರ ಕನಸಲ್ಲ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರ ಹಾಗೂ ಸಿಎಂ ವಿರುದ್ಧ ವಾಗ್ದಳಿ
  • ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ
ಬಳ್ಳಾರಿ : ಡಿ.ಕೆ.ಶಿವಕುಮಾರ್ ಅವರ ಮುಖ್ಯಮಂತ್ರಿ ಹುದ್ದೆ ಕೇವಲ ಅವರ ವೈಯಕ್ತಿಕ ಕನಸೇ ಹೊರತು, ರಾಜ್ಯದ ಜನರ ಕನಸಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್)ಕುರಿತು ಜಿಲ್ಲಾ ಬಿಜೆಪಿ ಪದಾಧಿಕಾರಿಗಳೊಂದಿಗೆ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಕೇವಲ ಬೆಂಗಳೂರು ಅಭಿವೃದ್ಧಿ ಮಾತ್ರ ರಾಜ್ಯದ ಅಭಿವೃದ್ಧಿ ಎಂಬುದಾಗಿ ನಂಬಿದ್ದಾರೆ. ಉತ್ತರ ಕರ್ನಾಟಕವನ್ನು ಮರೆತಿದ್ದಾರೆ. ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ಮಾತ್ರ ಅದ್ಯತೆ ನೀಡುತ್ತಿರುವ ಸಿಎಂ, ಶೇ.50 ರಷ್ಟು ರೈತರ ಏಳಿಗೆಯ ಕಡೆಗೆ ಆಸಕ್ತಿ ವಹಿಸಲಿ ಎಂದರು. ರಾಜ್ಯದಲ್ಲಿ ಭೀಕರ ಪರಿಸ್ಥಿತಿ ತಲೆದೋರಿದ್ದರೂ ರಾಜ್ಯದ ಕೃಷಿ ಸಚಿವರು ಯಾರು ಎಂಬುದೇ ಜನರಿಗೆ ತಿಳಿದಿಲ್ಲ. ಕಂದಾಯ ಸಚಿವರು ಸೇರಿದಂತೆ ಸರ್ಕಾರದ ಒಂಬತ್ತು ಸಚಿವರು ಬೆಂಗಳೂರು ಬಿಟ್ಟು ಹೊರಗಡೆ ಬರುತ್ತಿಲ್ಲ. ಇನ್ನು ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆಗೆ ಸರ್ಕಾರ ಬರೋಬ್ಬರಿ 24 ತಿಂಗಳುಗಳ ಕಾಲಾವಕಾಶ ತೆಗೆದುಕೊಂಡಿದೆ.
ಈ ಕುರುಡು ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಆದರೆ, ಬಿಡದಿಯಲ್ಲಿ ರೈತರನ್ನು ಕೇವಲ ಸಿಎಂಯಾದ 24 ಗಂಟೆಗಳಲ್ಲಿ ಒಕ್ಕಲೆಬ್ಬಿಸಿ ಟೌನ್‌ಶಿಪ್ ಮಾಡಲು ಹೊರಟಿದ್ದಾರೆ. ಇತ್ತ ಸಚಿವ ಸಂಪುಟ ವಿಸ್ತರಣೆ ಮಾಡಲು ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹೈಕಮಾಡ್ ನಾಯಕ ರಾಹುಲ್ ಗಾಂಧಿ ಇನ್ನೂ ಕಾಲವಕಾಶವನ್ನೇ ನೀಡಿಲ್ಲ ಎಂದು ಟೀಕಿಸಿದರು.
ಮುಂಬರುವ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಗೆಲ್ಲಲು ಪ್ರಯತ್ನಿಸಲಿದೆ. ಇದನ್ನು ಮೆಟ್ಟಿ ನಿಂತು ಬಿಜೆಪಿಯ ಅಭ್ಯರ್ಥಿಯ ಗೆಲುವಿಗಾಗಿ ಎಲ್ಲರೂ ಶ್ರಮಿಸಬೇಕಿದೆ. ಇನ್ನು ಮುಂಬರುವ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗಳಲ್ಲಿ ಕೇವಲ ಗುತ್ತಿಗೆದಾರರಿಗೆ ಟಿಕೆಟ್ ನೀಡದೆ, ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರಿಗೆ ಟಿಕೆಟ್ ನೀಡುವ ಜವಾಬ್ದಾರಿಯನ್ನು ಜಿಲ್ಲಾಧ್ಯಕ್ಷರು ಹಾಗೂ ಆಯಾ ಕ್ಷೇತ್ರದ ಮುಖಂಡರು ವಹಿಸಿಕೊಳ್ಳಬೇಕು. ಪ್ರಸಕ್ತ ಅಧಿವೇಶನ ಮುಗಿದ ತಕ್ಷಣವೇ ತಾವು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಪ್ರವಾಸ ಕೈಗೊಂಡು ಜನರ ಸಮಸ್ಯೆಗಳನ್ನು ಆಲಿಸುವುದಾಗಿ ಭರವಸೆ ನೀಡಿದರು.
ಕೇಂದ್ರ ಚುನಾವಣಾ ಆಯೋಗವು ಬರೋಬ್ಬರಿ ಇಪ್ಪತ್ತು ವರ್ಷಗಳ ನಂತರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕೈಗೆತ್ತಿಕೊಂಡಿದ್ದು, ಈ ಪ್ರಕ್ರಿಯೆಯು ಬಿಜೆಪಿ ಪದಾಧಿಕಾರಿಗಳ ನೇತೃತ್ವದಲ್ಲಿ ಯಶಸ್ವಿಯಾಗಿದೆ. ಕಳೆದ ಎರಡು ತಿಂಗಳ ಹಿಂದಷ್ಟೇ ಈ ಪ್ರಕ್ರಿಯೆಯನ್ನು ವಿರೋಧಿಸಿದ್ದ ಕಾಂಗ್ರೆಸ್ ಸರ್ಕಾರ, ಈಗ ಇದನ್ನು ಬಿಜೆಪಿಗಿಂತಲೂ ಹೆಚ್ಚು ಗಂಭೀರವಾಗಿ ಪರಿಗಣಿಸಿದೆ. ಸಿಎಂ ಡಿ.ಕೆ. ಶಿವಕುಮಾರ್ ಅವರು ಸರ್ಕಾರಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಈ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸುತ್ತಿದ್ದಾರೆ. ಈ ಎಸ್‌ಐಆರ್ ಪ್ರಕ್ರಿಯೆಯು ಮುಂದಿನ 20 ವರ್ಷಗಳ ಭವಿಷ್ಯ ರೂಪಿಸಲಿದ್ದು, ಚುನಾವಣೆಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವ ಮಾದರಿಯಲ್ಲೇ ಕಾರ್ಯಕರ್ತರು ಇದರಲ್ಲಿ ಭಾಗವಹಿಸಬೇಕು ಕರೆ ನೀಡಿದರು.
ಗಂಗಾವತಿ ಹಾಲಿ ಶಾಸಕ ಜಿ.ಜನಾರ್ದನರೆಡ್ಡಿ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರ ಶಕ್ತಿ ಬಳಸಿಕೊಂಡು, ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಸೋಲಿಸಿ ನೆಲಸಮಗೊಳಿಸಲಾಗುವುದು. ನಗರದ ಹೊರವಲಯದಲ್ಲಿರುವ ವಿಮಾನ ನಿಲ್ದಾಣದ ಸ್ಥಳದಿಂದ ಡಿಸಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ರ‌್ಯಾಲಿ ಹಮ್ಮಿಕೊಳ್ಳಲಾಗುವುದು. ಆಗಸ್ಟ್ ತಿಂಗಳಿನಲ್ಲಿ ಆಯಾ ಕ್ಷೇತ್ರವಾರು ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು, ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ನಿರಂತರ ಹೋರಾಟಗಳನ್ನು ನಡೆಸಲಾಗುವುದು ಎಂದರು.
ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಭಾರತದ ಜತೆಗೆ ಯುರೋಪ್‌ನಲ್ಲಿಯೂ ಮತದಾರರ ಚೀಟಿ ಹೊಂದಿದ್ದರೆ. ಒಂದು ವೇಳೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗಿಯಾದರೆ ಅಸಲಿ ಬಂಡವಾಳ ಬಯಲಾಗಲಿದೆ ಎಂಬ ಭಯ ಕಾಡುತ್ತಿದೆ ಎಂದರು.
ಕಲಬುರಗಿ ಕೇಂದ್ರ ಕಾರಾಗೃಹದಿಂದ ಕೈದಿಗಳು ಪರಾರಿಯಾಗುತ್ತಿದ್ದರೂ ಗೃಹ ಸಚಿವರಿಗೆ ಅದರ ಬಗ್ಗೆ ಪರಿಜ್ಞಾನವಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಕೇವಲ ಆರ್‌ಎಸ್‌ಎಸ್ ಸಂಘಟನೆ ಟೀಕಿಸುವುದು ಮತ್ತು ಬಿಜೆಪಿ ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸದಲ್ಲೇ ನಿರತರಾಗಿದ್ದಾರೆ ಎಂದರು. ಸಭೆಯಲ್ಲಿ ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ, ಮುಖಂಡರಾದ ಗುರುಲಿಂಗನಗೌಡ, ರಾಮಲಿಂಗಪ್ಪ, ಡಾ.ಎಸ್.ವಿ.ಮಹಿಪಾಲ್ ಇತರರಿದ್ದರು.
ಬಾಕ್ಸ್ : ಸಭೆಯ ಬ್ಯಾನರ್‌ನಲ್ಲಿ ಸಿರಗುಪ್ಪ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರ ಭಾವಚಿತ್ರ ಅಳವಡಿಸಿಲ್ಲ ಎಂಬುದಾಗಿ ಆ ಕ್ಷೇತ್ರದ ಮುಖಂಡರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ ಮೋಕಾ ವಿರುದ್ಧ ಸಭೆಯಲ್ಲಿ ಅಕ್ರೋಶಗೊಂಡರು. ವಿಜಯೇಂದ್ರ ಮಧ್ಯೆ ಪ್ರವೇಶಿಸಿ ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಳ್ಳಾರಿಯ ಐದು ಕ್ಷೇತ್ರಗಳಲ್ಲಿ ನಗರದಲ್ಲಿ ಎಸ್‌ಐಆರ್ ಫಾರ್ಮ್ ವಿತರಣೆಯಲ್ಲಿ ಹಿಂದೆ ಉಳಿದಿದೆ ಎಂಬುದಾಗಿ ರಾಜ್ಯಾಧ್ಯಕ್ಷರು ಸಭೆಗೆ ತಿಳಿಸಿದರು.
ಸಭೆ ನಂತರ ನಗರ ಶಾಸಕ ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಅವರು, ಜಿಲ್ಲಾಧ್ಯಕ್ಷ ಅನಿಲ್ ಅವರನ್ನು ನಗರದ ಪದಾಧಿಕಾರಿಗಳು ನೀಡಿದ ಎಸ್‌ಐಆರ್ ಮಾಹಿತಿ ಪ್ರತಿಯನ್ನು ರಾಜ್ಯಾಧ್ಯಕ್ಷರೇ ಏಕೆ ನೀಡಿಲ್ಲ ?. ಜಿಲ್ಲಾ ಕಮಿಟಿ ನೀಡಿದ ಪ್ರತಿ ಏಕೆ ರಾಜ್ಯಾಧ್ಯಕ್ಷರಿಗೆ ನೀಡಿದಿರಿ ಎಂದು ತರಾಟೆ ತೆಗೆದುಕೊಂಡರು. ಈ ವೇಳೆ ಸಹೋದರ ಜನಾರ್ದನರೆಡ್ಡಿ ಇಬ್ಬರಿಗೂ ಸಮಾಧಾನಪಡಿಸಿ ಕೊಠಡಿಯಲ್ಲಿ ಕುಳಿತು ಚರ್ಚಿಸಿ ತಿಳಿಗೊಳಿಸಿದರು. ಸಭೆಯ ಕೊನೆಯಲ್ಲಿ ರಾಷ್ಟ್ರಗೀತೆ ಹಾಡುವ ವೇಳೆ ಸ್ಪೀಕರ್ ಕೈಕೊಟ್ಟಿದ್ದರಿಂದ ಅರ್ಧ ಕಾರ್ಯಕರ್ತರು ಹಾಡಿದರೆ, ಊಳಿದ ಅರ್ಧ ಗೀತೆ ಸ್ಪೀಕರ್‌ನಿಂದ ಹಾಡಿಸಲಾಯಿತು.