ಕಾನಹೊಸಹಳ್ಳಿ ಸಮೀಪದ ಹುಡೇಂ ಗ್ರಾಮದಲ್ಲಿ ಈಶ್ವರ ದೇವಸ್ಥಾನದ ಗರುಡಗಂಬ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಗೌರವಿಸಲಾಯಿತು.
ಕಾನಹೊಸಹಳ್ಳಿ: ಸನ್ಮಾರ್ಗದಲ್ಲಿ ನಡೆಯುವ ಮೂಲಕ ಕಾಯಕ ನಿಷ್ಠೆ ಹೊಂದಿದ್ದರೆ ಭಗವಂತನ ಪ್ರೀತಿಗೆ ಪಾತ್ರರಾಗಲಿದ್ದಾರೆ. ಧಾರ್ಮಿಕ ಕಾರ್ಯಗಳ ಜತೆಗೆ ಪರೋಪಕಾರ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪ್ರಶಾಂತಸಾಗರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಹುಡೇಂ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಈಶ್ವರ ದೇವಸ್ಥಾನದ ಗರುಡಗಂಬ ಪ್ರತಿಷ್ಠಾಪನೆ ಪೂಜಾ ಕಾರ್ಯದ ನಂತರ ಧರ್ಮಸಭೆಯಲ್ಲಿ ಮಾತನಾಡಿದರು. ದೇವಸ್ಥಾನಗಳು ನೆಮ್ಮದಿಯ ತಾಣಗಳು ಎಂಬುದನ್ನು ಯಾರೂ ಮರೆಯುವಂತಿಲ್ಲ. ಧಾರ್ಮಿಕ ಆಚರಣೆಗಳಿಂದ ಮನಸ್ಸಿಗೆ ಸಮಾಧಾನದೊಂದಿಗೆ ದೈವಾನುಗ್ರಹದ ಭಾವ ದೊರೆಯಲಿದೆ. ಸನಾತನ ಧರ್ಮ ಪರಂಪರೆ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಗಳು ಹೆಚ್ಚಾಗಿ ನಡೆಯಬೇಕು ಎಂದು ತಿಳಿಸಿದರು.
ಇನ್ನೊಬ್ಬರಿಗೆ ಕೇಡು ಬಯಸಬಾರದು. ಹಬ್ಬ, ಹರಿದಿನಗಳು, ಜಾತ್ರೆ, ಉತ್ಸವ ನಡೆಯುವುದರಿಂದ ಬಾಂಧವ್ಯ ವೃದ್ಧಿಸಲಿದೆ. ಗ್ರಾಮಗಳಲ್ಲಿ ಎಲ್ಲರೂ ಒಂದೇ ಎನ್ನುವ ಭಾವನೆಯೊಂದಿಗೆ ಜೀವನ ನಡೆಸುವಂತಾಗಬೇಕು. ದೇಶದ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಉತ್ತಮ ಪ್ರಜೆಗಳಾಗಬೇಕು. ಮಳೆ, ಬೆಳೆ ಸಮೃದ್ಧಿಯಾಗಿ ನಾಡು ಸುಭಿಕ್ಷವಾಗಿರಲಿ ಎಂದು ಆಶೀರ್ವಚನ ನೀಡಿದರು.
ಶನಿವಾರ ಗಂಗಾಪೂಜೆ, ಹೋಮ, ಹವನ, ಅಭಿಷೇಕ, ಸೇರಿದಂತೆ ನಾನಾ ಪೂಜಾ ಕೈಂಕರ್ಯ, ಅನ್ನಸಂತರ್ಪಣೆ ನಡೆದವು. ಪ್ರಮುಖರಾದ ಕೆ.ರಾಜಶೇಖರಪ್ಪ, ಮರಿಬಸಪ್ಪರ ಬಸಣ್ಣ, ತಾಳ್ಕೇರಪ್ಪರ ಪ್ರಸನ್ನ, ಕೋಣನವರ ಮಲ್ಲಿಕಾರ್ಜುನಪ್ಪ, ತಾಳ್ಕೇರಪ್ಪರ ಗಂಗಮ್ಮ, ಪುಂಡಣ್ಣರ ವೀರಮ್ಮ, ತುಡುಮ ಗುರುರಾಜಣ್ಣ, ಮಠದ ಸಿದ್ಧಲಿಂಗಸ್ವಾಮಿ, ಕೆ.ಆರ್.ರವಿ, ಪಾಲಯ್ಯನಕೋಟೆ ಮಂಜುನಾಥ, ಕೆ.ಸಿ.ನಾಗರಾಜ, ಉಮಾಪತೆಪ್ಪರ ರೇವಣ್ಣ, ಜರುಗಯ್ಯ, ನಿಂಬೆಕಾಯಿ ಓಬಣ್ಣ, ಬೋಸಮಲ್ಲಯ್ಯ, ಜಿ.ಪಾಪನಾಯಕ, ಬಿ.ಎಸ್.ಪಾಪಣ್ಣ ಇತರರಿದ್ದರು.