ಬಳ್ಳಾರಿಯ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಬಳ್ಳಾರಿ : ನಗರ ಸೇರಿದಂತೆ ಜಿಲ್ಲಾದ್ಯಂತ ಮುಸ್ಲಿಂ ಬಾಂಧವರುಶ್ರದ್ಧಾ ಭಕ್ತಿಯೊಂದಿಗೆ ಸಂಭ್ರಮದಿಂದ ರಂಜಾನ್ ಹಬ್ಬ ಆಚರಿಸಿದರು. ಬೆಳಗ್ಗೆಯಿಂದಲೇ ನಗರದ ಎಪಿಎಂಸಿ ಬಳಿಯ ಈದ್ಗಾ ಮೈದಾನಕ್ಕೆ ತೆರಳಿದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವೃದ್ಧರಿಂದ ಹಿಡಿದು ಚಿಕ್ಕಮಕ್ಕಳು ಕೂಡ ಭಾಗವಹಿಸಿದ್ದರು.
ಹೊಸ ಧಿರಿಸು, ವಿಶೇಷ ಟೋಪಿ, ಕಣ್ಣಿಗೆ ಕಾಡಿಗೆ ಇಟ್ಟ ಚಿಣ್ಣರು ಎಲ್ಲರ ಗಮನ ಸೆಳೆದರು. ಧರ್ಮಗುರುಗಳು ಹಬ್ಬದ ಸಂದೇಶ ಸಾರಿ, ದಾನ - ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೆ ಸಹೋದರರಂತೆ ಬಾಳುವಂತೆ ಕರೆ ನೀಡಿದರು. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಅಪ್ಪಿಕೊಂಡು ಸೋದರತ್ವ ಮೆರೆದರು. ಶ್ವೇತ ವಸ್ತ್ರ ಧರಿಸಿ ಗುಂಪು ಗುಂಪಾಗಿ ಖಬರ್‌ಸ್ಥಾನ ಹಾಗೂ ಮಸೀದಿಗಳತ್ತ ಬಂದ ಮುಸ್ಲಿಂ ಬಾಂಧವರು ಸಿಹಿ ಹಂಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ತಿಂಗಳಿಡಿ ಉಪವಾಸ ಆಚರಿಸಿದ್ದ ಮುಸ್ಲಿಂ ಈದ್ ಉಲ್ ಫಿತ್ರ್ ದಿನ ವಿಶೇಷ ಊಟ ಸೇವಿಸಿದರು. ಶಾವಿಗೆ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಸಕ್ಕರೆ , ಹಾಲು, ಗಸಗಸೆ, ಪಿಸ್ತಾ ಬಳಸಿ ತಯಾರಿಸುವ ವಿಶೇಷ ಸಿಹಿ ತಿಂಡಿಗಳು ಹಾಗೂ ಬಗೆಬಗೆಯ ಮಾಂಸಾಹಾರಗಳನ್ನು ಮನೆಯಲ್ಲೇ ಸಿದ್ಧಪಡಿಸಲಾಗಿತ್ತು. ಸ್ನೇಹಿತರ, ಸಂಬಂಧಿಕರ ಮನೆಗೆ ತೆರಳಿ ಹಬ್ಬದ ಶುಭಾಶಯ ಕೋರುವುದು ಕಂಡು ಬಂತು. ಶಾಸಕ ನಾರಾಭರತರೆಡ್ಡಿ, ಸಂಸದ ಈ.ತುಕಾರಾಮ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಿ ಹಬ್ಬದ ಶುಭಾಶಯ ತಿಳಿಸಿದರು.