- ಧಾರ್ಮಿಕ ಜಾಗೃತಿ
- ಸಾಹಿತ್ಯಿಕ ಚಟುವಟಿಕೆ
ನಗರದ ಎಂಎಂ ಫಂಕ್ಷನ್ ಹಾಲ್ನಲ್ಲಿ ‘ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ಎಸ್‌ಎಸ್‌ಎಫ್) ಜಿಲ್ಲಾ ಸಮಿತಿಯಿಂದ ಆ.09 ( ಭಾನುವಾರ )ದಂದು ‘ಸಾಹಿತ್ಯೋತ್ಸವ’ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಸಿದ್ದಕಿ ಸಖಾಫಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ 14 ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿರುವ ಈ ಸಾಹಿತ್ಯೋತ್ಸವವು ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಜಾಗೃತಿ ಹಾಗೂ ಸಾಹಿತ್ಯಿಕ ಚಟುವಟಿಕೆ ಉತ್ತೇಜಿಸುವ ಪ್ರಮುಖ ವೇದಿಕೆಯಾಗಿದೆ. ಮಸೀದಿ ಹಂತದಿಂದ ಆರಂಭಗೊಂಡು ಸೆಕ್ಟರ್, ಡಿವಿಷನ್, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದವರೆಗೆ ವಿಸ್ತರಿಸಿರುವ ಈ ಉತ್ಸವದಲ್ಲಿ ವಿವಿಧ ವಿಭಾಗಗಳ ಸ್ಪರ್ಧೆಗಳು ನಡೆಯಲಿವೆ. ಭಾಷಣ, ಬರಹ, ಹಾಡುಗಾರಿಕೆ, ಪ್ರಬಂಧ, ಚಿತ್ರಕಲೆ, ಸ್ಲೋಗನ್ ರಚನೆ ಸೇರಿದಂತೆ 150ಕ್ಕೂ ಹೆಚ್ಚು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಕನ್ನಡ, ಹಿಂದಿ, ಉರ್ದು, ಅರೇಬಿಕ್ ಹಾಗೂ ಇಂಗ್ಲಿಷ್ ಸೇರಿದಂತೆ ನಾನಾ ಭಾಷೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕಲಾಪ್ರತಿಭೆ ಪ್ರದರ್ಶಿಸಲಿದ್ದಾರೆ ಎಂದರು.
ದೇಶಾದ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಸಂವಿಧಾನಾತ್ಮಕ ಮೌಲ್ಯಗಳೊಂದಿಗೆ ಸಮಾಜದ ಯುವ ಸಮುದಾಯ ನಿರ್ಮಿಸುತ್ತಿರುವ ಎಸ್‌ಎಸ್‌ಎಫ್, ಈ ಸಾಹಿತ್ಯೋತ್ಸವದ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುತ್ತಿದೆ ಎಂದರು. ಪದಾಧಿಕಾರಿಗಳಾದ ಹುಸೈನ್ ಮರ್ಝೂಕಿ, ನವಾಜ್ ಸಖಾಫಿ ಇದ್ದರು.