- ಇಂಡೆಂಟ್ ಸಲ್ಲಿಸಿದ ಆಂಧ್ರ
- ಜಂಟಿಯಾಗಿ ಹರಿಸಲು ಕೋರಿಕೆ
ತುಂಗಭದ್ರಾ ನದಿ ನೀರು ಹಂಚಿಕೆ ವಿಚಾರದಲ್ಲಿ ಆಂಧ್ರ ಹಾಗೂ ಕರ್ನಾಟಕ ರೈತರ ಮಧ್ಯೆ ಎದ್ದಿದ್ದ ವಿವಾದಕ್ಕೆ ಆಂಧ್ರ ಸರ್ಕಾರ ಬೋರ್ಡ್‌ಗೆ ಇಂಡೆಂಟ್ (ಬೇಡಿಕೆ ಪತ್ರ) ಸಲ್ಲಿಸುವ ಮೂಲಕ ತೆರೆ ಬಿದ್ದಿದೆ.
ಜಲಾಶಯದ ಬಲದಂಡೆ ಕೆಳಮಟ್ಟದ (ಎಲ್‌ಎಲ್) ಮತ್ತು ಮೇಲ್ಮಟ್ಟದ (ಎಚ್‌ಎಲ್) ಕಾಲುವೆಗಳಿಗೆ ಆ. 11ರಂದು ನಡೆದ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಲ್ಲಿ ನೀರು ಹರಿಸಲು ನಿರ್ಧರಿಸಲಾಗಿತ್ತು. ಆದರೆ, ಆಂಧ್ರವು ಕೃಷಿಗಾಗಿ ತನ್ನ ಪಾಲಿನ ನೀರು ಹರಿಸಲು ಬೇಡಿಕೆ ಸಲ್ಲಿಸಲಿಲ್ಲ. ಹೀಗಾಗಿ ಉಭಯ ರಾಜ್ಯಗಳ ಪಾಲಿನ ನೀರನ್ನು ಜಂಟಿಯಾಗಿ ಹರಿಸದ ಪರಿಣಾಮ ಜಲಾಶಯದಿಂದ ರಾಜ್ಯದ ಪಾಲಿನ ನೀರನ್ನು ಕಾಲುವೆಗಳಿಗೆ ನೀರು ಹರಿಸುತ್ತಿದ್ದಂತೆಯೇ ಆಂಧ್ರ ರೈತರು ಕ್ಯಾತೆ ತೆಗೆದು ರಾಜ್ಯದ ರೈತರೊಂದಿಗೆ ಸಂಘರ್ಷಕ್ಕೆ ಇಳಿದಿದ್ದರು. ಜತೆಗೆ ಬಳ್ಳಾರಿ ತಾಲೂಕಿನ ಗಡಿ ಭಾಗದಲ್ಲಿ ತುಂಗಭದ್ರಾ ಎಲ್‌ಎಲ್ ಕಾಲುವೆ ಬಳಿ ಉದ್ವಿಗ್ನತೆ ಮನೆ ಮಾಡಿತ್ತು.
ಸದ್ಯ, ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆ (ಎಲ್‌ಎಲ್‌ಸಿ) ವ್ಯಾಪ್ತಿಗೆ ಹಾಗೂ ಮೇಲ್ಮಟ್ಟದ ಸ್ಲೂಯಿಸ್‌ಗಳಿಗೆ ನೀರು ಹರಿಸುವಂತೆ ಆಂಧ್ರಪ್ರದೇಶದ ನೀರಾವರಿ ಇಲಾಖೆಯ ಅಧಿಕಾರಿಗಳು ತುಂಗಭದ್ರಾ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ. ಆಂಧ್ರಪ್ರದೇಶ ವ್ಯಾಪ್ತಿಯ ತುಂಗಭದ್ರಾ ಎಲ್‌ಎಲ್ ಕಾಲುವೆಗೆ ಪ್ರತಿದಿನ 650 ಕ್ಯೂಸೆಕ್‌ನಂತೆ ಆ.22ರಿಂದ ಆ.31(ಹತ್ತು ದಿನಗಳ)ವರೆಗೆ ನೀರು ಹರಿಸಲು ಕೋರಿದೆ. ಬೋರ್ಡ್ ನಿಯಮದಂತೆ ಹತ್ತು ದಿನಕ್ಕೊಮ್ಮೆ ನೇರವಾಗಿಯೇ ಸೂಪರ್‌ಡೆಂಟ್ ಇಂಜನಿಯರ್‌ಗಳೇ ಇಂಡೆಂಟ್ (ಬೇಡಿಕೆ ಪತ್ರ) ಸಲ್ಲಿಸಲಿದ್ದು, ಒಟ್ಟಾರೆ 90 ದಿನಗಳವರೆಗೆ ಆಂಧ್ರದ ಪಾಲಿನ ನೀರು ಹರಿಯಲಿದೆ. ಆಂಧ್ರದ ವಿಜಯವಾಡದಲ್ಲಿ ತುಂಗಭದ್ರಾ ಜಲಾಶಯದಿಂದ ಆಂಧ್ರ ಪಾಲಿನ ಎಲ್‌ಎಲ್ ಕಾಲುವೆಗೆ ನೀರು ಹರಿಸುವುದರ ಬಗ್ಗೆ ಆ.18ರಂದು ಸಭೆ ನಡೆದಿತ್ತು. ಇದರಲ್ಲಿ ಕುಡಿವ ನೀರು ಹಾಗೂ ಬೆಳೆಗಾಗಿ ನೀರು ಹರಿಸುವಂತೆ ಆಂಧ್ರ ರೈತರು ಒತ್ತಾಯಿಸಿದ್ದರು.
ಸದ್ಯ, ಕರ್ನಾಟಕವೂ ಆ.11ರಿಂದ ನ.11ರವರೆಗೆ ಹಾಗೂ ಆಂಧ್ರವೂ ಆ.22ರಿಂದ ನ.22ರವೆಗೆ ತಲಾ 650 ಹಾಗೂ ಸೋರಿಕೆ ನೀರು 200 ಸೇರಿ ಒಟ್ಟಾರೆ 1500 ಕ್ಯೂಸೆಕ್ ಜಂಟಿಯಾಗಿ ಎಲ್‌ಎಲ್ ಕಾಲುವೆಯಲ್ಲಿ ಹರಿಯಲಿದೆ. ಇದರಿಂದ, ತುಂಗಭದ್ರಾ ಜಲಾಶಯದಿಂದ ನೀರು ಹರಿಸಿದ್ದರೂ ಆಂಧ್ರದ ಪಾಲಿನ ನೀರಿನ ಬಿಡುಗಡೆಯಲ್ಲಿ ಉಂಟಾಗಿರುವ ಗೊಂದಲ, ಕಾಲುವೆಯ ಕೊನೆ ಭಾಗದ ಕರ್ನಾಟಕದ ರೈತರ ಜಮೀನುಗಳಿಗೆ ನೀರು ತಲುಪದಿರುವುದು ಗೊಂದಲಕ್ಕೆ ತೆರೆ ಎಳೆದಿದೆ.
ಕೋಟ್... ಬೋರ್ಡ್‌ಗೆ ಆಂಧ್ರ ಪಾಲಿನ ನೀರಿಗೆ ಇಂಡೆಂಟ್ ಸಲ್ಲಿಸುವ ಮೂಲಕ ರೈತರ ಕೊನೆಯ ಭಾಗಕ್ಕೆ ನೀರು ತಲುಪಲಿದೆ. ಸದ್ಯ, 90 ದಿನಗಳವರೆಗೆ ಜಂಟಿಯಾಗಿ ನೀರು ಹರಿಯುವುದರಿಂದ ಬೆಳೆಗಳಿಗೆ ನೀರು ಹರಿಸಲು ಸಹಕಾರಿಯಾಗಲಿದೆ.- ಡಾ.ಪುರುಷೋತ್ತಮಗೌಡ, ಅಧ್ಯಕ್ಷ, ತುಂಗಭದ್ರಾ ರೈತ ಸಂಘ.