ನಿಟ್ಟೂರು ಬಳಿಯ ರಾಷ್ಟ್ರಕೂಟರ ಕಾಲದ ಬಂಡೆಗಲ್ಲು ಶಾಸನದ ಪಡಿಯಚ್ಚನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಪಡೆದುಕೊಂಡರು.  
ಬಳ್ಳಾರಿ

ಭಾರತಶ್ರೀ ಯೋಜನೆಯಡಿ ಶಾಸನಗಳ ಡಿಜಿಟಲೀಕರಣ

ಸಿರಗುಪ್ಪ: ಮೈಸೂರಿನಲ್ಲಿರುವ ಭಾರತೀಯ ಪುರಾತತ್ವ ಇಲಾಖೆಯ ಶಾಸನಶಾಸ್ತ್ರ ವಿಭಾಗದಿಂದ ತೆಕ್ಕಲಕೋಟೆ, ನಿಟ್ಟೂರು, ಉಡೇಗೋಳ ಪ್ರದೇಶದಲ್ಲಿನ ಪ್ರಕಟಿತ ಮತ್ತು ಅಪ್ರಕಟಿತ ಶಾಸನಗಳ ಪಡಿಯಚ್ಚು ತೆಗೆದು ಡಿಜಿಟಲೀಕರಣಗೊಳಿಸಲಾಗುತ್ತಿದೆ ಎಂದು ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಹಾಯಕ ಅಧೀಕ್ಷಕ ಅನಿಲ್ ಕುಮಾರ್ ಆರ್.ವಿ. ಹೇಳಿದರು.
ನಿಟ್ಟೂರು ಗ್ರಾಮದ ಬಳಿ ಇತ್ತೀಚಿಗೆ ಪತ್ತೆಯಾದ ರಾಷ್ಟ್ರಕೂಟರ ಕಾಲದ ಬಂಡೆಗಲ್ಲು ಶಾಸನ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದರು. ಭಾರತಶ್ರೀ ಯೋಜನೆಯಡಿ ಗ್ರಾಮದಲ್ಲಿ ದೊರೆತ ಪುರಾತನ ಶಾಸನಗಳನ್ನು ಡಿಜಿಟಲೀಕರಣಗೊಳಿಸಿ, ಅವುಗಳನ್ನು ಸಂರಕ್ಷಿಸುವುದು ಮತ್ತು ಸಾರ್ವಜನಿಕರು. ಸಂಶೋಧಕರಿಗೆ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದರು.
ಶಾಸನಗಳ ಹೈ-ರೆಸೂಲ್ಯೂಶನ್ ಸ್ಕ್ಯಾನ್ ಪ್ರತಿ, ಲಿಪ್ಯಂತರ ಮತ್ತು ಅದಕ್ಕೆ ಸಂಬಂಧಿಸಿದ ಐತಿಹಾಸಿಕ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಶೇಖರಿಸಲಾಗುವುದು. ಇದರಿಂದ ಇತಿಹಾಸಕಾರರು ಹಾಗೂ ವಿದ್ಯಾರ್ಥಿಗಳಿಗೆ ಭೌತಿಕ ಪ್ರತಿಗಳ ಅವಲಂಬನೆ ತಪ್ಪಿ ಎಲ್ಲಿಂದಲಾದರೂ ಶಾಸನಗಳ ಅಧ್ಯಯನ ನಡೆಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಪಟ್ಟಣದ ಪ್ರಾಗೈತಿಹಾಸಿಕ ನೆಲೆಯ ಬಳಿ ದೊರೆತ ಗೌಡ್ರ ಮೂಲೆ ಬಂಡೆಗಲ್ಲು ಶಾಸನ, ನಿಟ್ಟೂರಿನ ಆಂಜನೇಯ ದೇವಸ್ಥಾನ ಬಳಿಯ ಬಂಡೆ ಶಾಸನ ಹಾಗೂ ರಾಷ್ಟ್ರಕೂಟರ ಕಾಲದ ಬಂಡೆಗಲ್ಲು ಶಾಸನ ಸ್ಥಳಗಳಿಗೆ ಭೇಟಿ ನೀಡಿ ಶಾಸನಗಳ ಪಡಿಯಚ್ಚು ತೆಗೆದುಕೊಂಡರು. ಸಿಬ್ಬಂದಿ ನಾಗೇಂದ್ರ, ನಿಶಾಂತ್ ಕುಮಾರ್, ಗೌರವ್, ಇತಿಹಾಸ ಸಂಶೋಧನಾರ್ಥಿಗಳಾದ ಮನೋಹರ ಸಿ.ಎಂ., ಎಂ.ಹೊನ್ನೂರ, ನಿಟ್ಟೂರು ಮಂಜುನಾಥ ಇದ್ದರು.