ಮೈಲಾರದಲ್ಲಿ ಜಾತ್ರೋತ್ಸವದ ಅಂಗವಾಗಿ ದೇವಸ್ಥಾನದ ಧರ್ಮಕರ್ತರು, ಕಾರ್ಣಿಕದ ಗೊರವಯ್ಯ ರಾಮಣ್ಣನಿಗೆ ಕಂಕಣಧಾರಣೆ ಮಾಡುವ ಮೂಲಕ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಿದರು.
ಹೂವಿನಹಡಗಲಿ: ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೋತ್ಸವಕ್ಕೆ ಭಾನುವಾರ ಶ್ರೀಸ್ವಾಮಿ ಹಾಗೂ ಧಾರ್ಮಿಕ ಕಾರ್ಯಗಳನ್ನು ನಡೆಸುವವರಿಗೆ ಕಂಕಣಧಾರಣೆ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಲಾಯಿತು.
ಬೆಳಗ್ಗೆ ಸ್ವಾಮಿಗೆ ವಿಶೇಷ ಪೂಜೆಗಳು ಜರುಗಿದ ಬಳಿಕ, ಪಲ್ಲಕ್ಕಿಯಲ್ಲಿ ಸ್ವಾಮಿ ಮೆರವಣಿಗೆ ನಡೆಸಿ ದೇವಸ್ಥಾನದ ರಂಗಮಂಟಪದಲ್ಲಿ ನವಧಾನ್ಯಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ರಥಸಪ್ತಮಿಯ ದಿನವಾದ ಭಾನುವಾರ ಆಕಳಿನ ಹಾಲನ್ನು ಉಕ್ಕಿಸಲಾಯಿತು. ನೆರೆದಿದ್ದ ಭಕ್ತರಲ್ಲಿ ಹಾಲು ಯಾವ ದಿಕ್ಕಿಗೆ ಉಕ್ಕಬಹುದು ಎಂಬ ಕುತೂಹಲ ಮನೆಮಾಡಿತ್ತು. ಈ ಬಾರಿ ಹಾಲು ಉತ್ತರ ದಿಕ್ಕಿಗೆ ಉಕ್ಕಿದ್ದರಿಂದ ಆ ಭಾಗದಿಂದ ಬಂದಿದ್ದ ಭಕ್ತರು ಕುಣಿದು ಕುಪ್ಪಳಿಸುತ್ತ ಸ್ವಾಮಿಗೆ ಜೈಕಾರ ಹಾಕಿದರು. ಕಳೆದ ಬಾರಿ ಹಾಲು ಉತ್ತರ ಈಶಾನ್ಯ ದಿಕ್ಕಿಗೆ ಉಕ್ಕಿತ್ತು; ಆ ಭಾಗದಲ್ಲಿ ಮಳೆ ಬೆಳೆ ಸಮೃದ್ಧಿಯಾಗಿದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಇದೇ ಸಂದರ್ಭ ಕಾರ್ಣಿಕ ನುಡಿಯುವ ಗೊರವಯ್ಯ ಅವರು ಸಂಪ್ರದಾಯದಂತೆ ಬಿಲ್ಲಿಗೆ ಪೂಜೆ ಸಲ್ಲಿಸಿದರು. ಎಲ್ಲ ಧಾರ್ಮಿಕ ಆಚರಣೆಗಳಿಗೆ ದೇವಸ್ಥಾನದ ವಂಶಪಾರಂಪರ್ಯ ಧರ್ಮಕರ್ತ ಗುರುವೆಂಕಪಯ್ಯ ಒಡೆಯರ್ ನೇತೃತ್ವ ವಹಿಸಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ಪ್ರಮೋದ್ ಭಟ್, ದೇವಸ್ಥಾನದ ಇಒ ಮಲ್ಲಪ್ಪ, ಕಾರ್ಣಿಕದ ಗೊರವಯ್ಯ ರಾಮಣ್ಣ, ಬಾಬುದಾರರು ಹಾಗೂ ಇತರರು ಉಪಸ್ಥಿತರಿದ್ದರು.
ಬಿಕ್ಕಟ್ಟು ಪರಿಹಾರ
ಪ್ರತಿ ವರ್ಷ ಜಾತ್ರೆ ಸಮೀಪಿಸುತ್ತಿದ್ದಂತೆ ದೇವಸ್ಥಾನದ ಧರ್ಮಕರ್ತ ಹಾಗೂ ಬಾಬುದಾರರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗುತ್ತಿತ್ತು. ಈ ಬಾರಿಯೂ ಬಾಬುದಾರರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಳೆದ ತಿಂಗಳು ಪತ್ರಿಕಾಗೋಷ್ಠಿ ನಡೆಸಿದ್ದರು. ಧರ್ಮಕರ್ತರ ವಿರುದ್ಧ ಆರೋಪಗಳನ್ನು ಮಾಡಿ, ಈ ಬಾರಿ ಜಾತ್ರೋತ್ಸವದ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ತದನಂತರ ಶಾಸಕ ಕೃಷ್ಣನಾಯ್ಕ ಹಾಗೂ ಜಿಲ್ಲಾಧಿಕಾರಿ ಕವಿತಾ ಅವರು ಬಾಬುದಾರರ ಸಭೆ ನಡೆಸಿ, ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆ ನೀಡಿದ್ದರು. ಭಾನುವಾರ ಜಾತ್ರೋತ್ಸವದ ಸಿದ್ಧತೆಗಳಿಗೆ ಸರಾಗವಾಗಿ ಚಾಲನೆ ದೊರೆತಿರುವುದರಿಂದ ಬಾಬುದಾರರು ಮತ್ತು ಧರ್ಮಕರ್ತರ ನಡುವಿನ ಬಿಕ್ಕಟ್ಟು ಸದ್ಯಕ್ಕೆ ಶಮನಗೊಂಡಂತಾಗಿದೆ.