ಸಂಡೂರು ತಾಲೂಕು ಕಾಳಿಂಗೇರಿಯಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ಎರಡು ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸಂಸದ ಈ.ತುಕಾರಾಮ್ ಭೂಮಿಪೂಜೆ ನೆರವೇರಿಸಿದರು.
ಸಂಡೂರು: ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ಕಾಳಿಂಗೇರಿಯಲ್ಲಿ ಎರಡು ಕೊಠಡಿಗಳ ಉದ್ಘಾಟನೆ ಮತ್ತು ಎರಡು ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ ಎಂದು ಸಂಸದ ಈ.ತುಕಾರಾಮ್ ಹೇಳಿದರು.
ಕಾಳಿಂಗೇರಿಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಭಾನುವಾರ ಮಾತನಾಡಿದರು. ಕೆಕೆಆರ್‌ಡಿಬಿ ಅನುದಾನದಲ್ಲಿ ಎಸ್.ಗೊಲ್ಲರಟ್ಟಿಯಲ್ಲಿ ಒಂದು ಶಾಲಾ ಕೊಠಡಿ, ಸಿ.ಲಕ್ಕಲಹಳ್ಳಿಯಲ್ಲಿ ಎರಡು ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಸೋವೇನಹಳ್ಳಿ ಗ್ರಾಮದಲ್ಲಿ ಆರು ಸರ್ಕಾರಿ ಶಾಲಾ ಕೊಠಡಿಗಳ ಉದ್ಘಾಟನೆ ಮಾಡಲಾಗಿದೆ. ಅಭಿವೃದ್ದಿ ನಿರಂತರ ಪ್ರಕ್ರಿಯೆವಾಗಿದ್ದು, ಅನುದಾನ ದೊರೆತಲ್ಲಿ ಅಭಿವೃದ್ಧಿ ಕಾರ್ಯ ಮುಂದುವರಿಸಲಾಗುವುದು. ಡಾ.ಡಿ.ಎಂ.ನಂಜುಂಡಪ್ಪ ವರದಿಯಂತೆ ಶೈಕ್ಷಣಿಕವಾಗಿ ಹಿಂದುಳಿದಿರುವ ಸಂಡೂರು ತಾಲೂಕನ್ನು ಮುಂದೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಸಣ್ಣ ಉಪ್ಪಾರಹಳ್ಳಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಆಂಜನೇಯ ದೇವಸ್ಥಾನ, ಅಗ್ರಹಾರ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಗ್ರಾಪಂ ಸದಸ್ಯರಾದ ಬಿ.ಕೊಟ್ರಮ್ಮ, ಯು.ಕೊಟ್ರೇಶಿ, ಮುಖಂಡರಾದ ಜಯರಾಂ, ವೀರೇಶ್ ಕುಮಾರ್, ಕೆ.ಜಂಭಣ್ಣ, ಹುಲಿಕುಂಟೆಪ್ಪ, ಕೆ.ಮಲ್ಲಿಕಾರ್ಜುನ, ಮಾರೆಪ್ಪ, ಈರಣ್ಣ, ಜಿಪಂ ಉಪ ವಿಭಾಗದ ಎಇಇ ಪ್ರಕಾಶ್ ನಾಯ್ಕ ಮುಂತಾದವರಿದ್ದರು.