ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆ ಮುಂಭಾಗದಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಠಾಣಾ ಸಿಪಿಐ ಟಿ. ಮಹಾತೇಂಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಪ್ರಮುಖರಾದ ಬೋಯಪಾಟಿ ವಿಷ್ಣು, ಈರನಗೌಡ, ರಾಮಾಂಜನಿ, ವೀರೇಶ್, ಸುಮತಿ ಇತರರಿದ್ದರು. ==
- ಜಿಲ್ಲಾ ಕಾಂಗ್ರೆಸ್ ಘಟಕದಿಂದ ಒತ್ತಾಯ
ಬಳ್ಳಾರಿ : ಕಾಂಗ್ರೆಸ್ ನಾಯಕರ ವಿರುದ್ಧ ಶಾಸಕ ಯಶಪಾಲ್ ಸುವರ್ಣ ಪ್ರಚೋನದನಕಾರಿ ಹೇಳಿಕೆ ಖಂಡಿಸಿ, ಕಾನೂನು ಕ್ರಮಕ್ಕೆ ಒತ್ತಾಯಿಸಿ, ಇಲ್ಲಿನ ಬ್ರೂಸ್‌ಪೇಟೆ ಠಾಣೆಯಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಮನವಿ ಸಲ್ಲಿಸಲಾಯಿತು.
ಜುಲೈ 28ರಂದು ಉಡುಪಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಶಾಸಕ ಯಶಪಾಲ್ ಸುವರ್ಣ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ನಿಂದನಕಾರಿ ಶಬ್ದ ಬಳಸಿ ಡ್ರಗ್ಸ್ ಅಡಿಕ್ಟ್ ಎಂದು ಕರೆದಿದ್ದರು.
ಬಾಬ್ರಿ ಮಸೀದಿ ಹೇಗೆ ಧ್ವಂಸ ಮಾಡಿದ್ದೇವೋ, ಅದೇ ರೀತಿ ರಾಹುಲ್ ಗಾಂಧಿ ಅವರ ವಂಶವನ್ನೂ ಧ್ವಂಸ ಮಾಡುತ್ತೇವೆ ಎಂಬುದಾಗಿ ಶಾಸಕರು ದ್ವೇಷಪೂರಿತವಾಗಿ ಬೆದರಿಕೆ ಹಾಕಿದ್ದಾರೆ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ವಿರುದ್ಧ ‘ರಾಷ್ಟ್ರದ್ರೋಹಿ’ ಎಂದು ಘೋಷಣೆ ಕೂಗಿದ್ದಾರೆ ಎಂಬುದಾಗಿ ಆರೋಪಿಸಲಾಯಿತು. ದೇಶದ ಸ್ವಾತಂತ್ರಹಾಗೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಕುಟುಂಬಕ್ಕೆ ಬೆದರಿಕೆ ಹಾಕಿರುವುದು ಖಂಡನೀಯ. ಈ ಪ್ರಚೋದನಕಾರಿ ಹೇಳಿಕೆ ನೀಡಿದ ಶಾಸಕ ಯಶಪಾಲ್ ಸುವರ್ಣ ಅವರನ್ನು ತಕ್ಷಣವೇ ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಘಟಕದಿಂದ ಆಗ್ರಹಿಸಲಾಯಿತು.