ಶಿವಶಂಕರ್ 
ಬಳ್ಳಾರಿ

ಉಪ ನೋಂದಣಾಧಿಕಾರಿ ಬಂಧನಕ್ಕೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ
ಬಳ್ಳಾರಿ : ಜಾತಿ ದೌರ್ಜನ್ಯ ಹಾಗೂ ಕೊಲೆ ಬೆದರಿಕೆ ಆರೋಪ ಎದುರಿಸುತ್ತಿರುವ ಸಿರಗುಪ್ಪ ಪಟ್ಟಣದ ಉಪ ನೋಂದಣಾಧಿಕಾರಿ ಯಲ್ಲಾರೆಡ್ಡೆಪ್ಪ ಅವರನ್ನು ಕೂಡಲೇ ಬಂಧಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಶಂಕರ್ ಆಗ್ರಹಿಸಿದರು. ನಗರದ ಪತ್ರಿಕಾಭವನದಲ್ಲಿ ಅಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆ.13ರಂದು ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ಎಚ್. ಗಾಳೆಪ್ಪ ಅವರ ಮೇಲೆ ಯಲ್ಲಾರೆಡ್ಡೆಪ್ಪ ಹಾಗೂ ಅವರೊಂದಿಗೆ ಬಂದಿದ್ದ ಇತರರು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು.
ಘಟನೆಗೆ ಸಂಬಂಧಿಸಿದಂತೆ ಯಲ್ಲಾರೆಡ್ಡೆಪ್ಪ ಸೇರಿದಂತೆ ಆರು ಮಂದಿ ವಿರುದ್ಧ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಬೆದರಿಕೆ, ಹಲ್ಲೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆದರೆ ಪ್ರಕರಣ ದಾಖಲಾಗಿ ಹಲವು ದಿನಗಳು ಕಳೆದರೂ ಆರೋಪಿಗಳ ಬಂಧನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೂ ಆರೋಪಿ ಯಲ್ಲಾರೆಡ್ಡೆಪ್ಪ ಅವರು ಸಿರುಗುಪ್ಪ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಕಾನೂನು ಸುವ್ಯವಸ್ಥೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಹಲ್ಲೆಗೊಳಗಾದ ದಲಿತ ರೈತ ಎಚ್.ಗಾಳೆಪ್ಪಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಹಳೇಕೋಟೆ ಹಾಗೂ ದೇವಲಾಪುರ ಗ್ರಾಮಗಳ ವ್ಯಾಪ್ತಿಯ ಸರ್ವೇ 64ರ ನಂಬರ್‌ಗಳಿಗೆ ಸಂಬಂಧಿಸಿದ ಸುಮಾರು 143 ಎಕರೆ 32 ಸೆಂಟ್ಸ್ ಜಮೀನು ಕರ್ನಾಟಕ ಸರ್ಕಾರದ ಹೆಸರಿನಲ್ಲಿ ನಮೂದಿಸಿರುವ ಆದೇಶದ ಪ್ರತಿಗಳು ದೊರೆತಿವೆ. ಈ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಸರ್ಕಾರ ಕೂಡಲೇ ಹಕ್ಕುಪತ್ರ ನೀಡಬೇಕು ಎಂದರು. ಮುಖಂಡರಾದ ಮುನಿಯಪ್ಪ, ಮಲ್ಲಯ್ಯ, ಒಬ್ಳೆಶ್ವರಪ್ಪ, ಮಾರುತಿ ಗಾಳೆಪ್ಪ, ನಾಗರಾಜ್, ಬಸಪ್ಪ ಇದ್ದರು.