ಬಳ್ಳಾರಿಯ ವಿಎಸ್‌ಕೆ ವಿವಿಯ ಹೊರನೋಟ 
ಬಳ್ಳಾರಿ

ಘಟಿಕೋತ್ಸವ ಪ್ರಮಾಣ ಪತ್ರ ವಿಳಂಬ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಅರ್ಜಿ ಸಲ್ಲಿಕೆ ಅಭ್ಯರ್ಥಿಗಳಿಗೆ ಸಂಕಷ್ಟ
  • ಗುತ್ತಿಗೆ ಸಿಬ್ಬಂದಿ ನಿರ್ಲಕ್ಷೃದ ಆರೋಪ
ಬಳ್ಳಾರಿ : ನಗರದ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯವು ಶೈಕ್ಷಣಿಕ ಸುಧಾರಣಾ ಕ್ರಮಗಳಿಗಿಂತ ವಿವಾದಗಳ ಸುಳಿಯಲ್ಲಿ ಸಿಲುಕಿ ಮತ್ತೋಮ್ಮೆ ಚರ್ಚೆಗೆ ಮುನ್ನಲೆಗೆ ಬಂದಿದೆ. ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ 80ಕ್ಕೂ ಅಧಿಕ ಪದವಿ ಕಾಲೇಜುಗಳು ವಿಎಸ್‌ಕೆ ವಿವಿ ವ್ಯಾಪ್ತಿಗೆ ಒಳಪಟ್ಟಿದೆ. ಅದರಂತೆ 20ಕ್ಕೂ ಅಧಿಕ ಬಿ.ಇಡಿ ಕಾಲೇಜುಗಳಿದ್ದು, ಆರು ಸಾವಿರಕ್ಕೂ ಅಧಿಕ ಪ್ರಶಿಕ್ಷಣಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ, 2024-25 ಹಾಗೂ 2025-26ನೇ ಸಾಲಿನಲ್ಲಿ ಬಿ.ಇಡಿ. ಪೂರ್ಣಗೊಳಿಸಿದ ಶಿಕ್ಷಕರಿಗೆ ಸಂಕಷ್ಟ ಎದುರಾಗಿದೆ.
ರಾಜ್ಯ ಸರ್ಕಾರ ಈಚೆಗೆ ಹೊರಡಿಸಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಬರುವ ವಸತಿ ಶಾಲೆಗಳಲ್ಲಿನ (ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್)ವಸತಿ ಶಾಲೆಗಳ ಖಾಲಿಯಿರುವ ಗ್ರೂಪ ಸಿ ವೃಂದದ 1045 ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಆ.13ಕೊನೆಯ ದಿನವಾಗಿದೆ. ಸದ್ಯ, ಈ ಅರ್ಜಿ ಸಲ್ಲಿಕೆಗೆ ಬಿ.ಇಡಿ. ಪೂರ್ಣಗೊಳಿಸದ ಪ್ರಶಿಕ್ಷಣಾರ್ಥಿಗಳು ಘಟಿಕೋತ್ಸವ ಪ್ರಮಾಣ ಪತ್ರ ಅಥವಾ ತಾತ್ಕಲಿಕ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ.
ಆದರೆ, ಸರ್ಕಾರದಿಂದ ಆಧಿಸೂಚನೆ ಹೊರಡಿಸದ ಕೆಲ ದಿನಗಳಲ್ಲೇ ಅಭ್ಯರ್ಥಿಗಳು ಪ್ರಮಾಣಪತ್ರಕ್ಕಾಗಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈವರೆಗೆ ಆಯಾ ಕಾಲೇಜುಗಳಿಗೆ ಪೂರ್ಣ ಪ್ರಮಾಣದಲ್ಲಿ ಪ್ರಮಾಣಪತ್ರ ವಿತರಣೆಯಾಗಿಲ್ಲ. ಕಾಲೇಜು ಆಡಳಿತ ಮಂಡಳಿಯನ್ನು ಪ್ರಶ್ನಿಸಿದರೆ ಪ್ರಮಾಣಪತ್ರ ವಿತರಿಸುವುದು ವಿವಿಗೆ ಸಂಬಂಧಿಸಿದ್ದು, ಕಾಲೇಜು ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ ಎಂಬುದಾಗಿ ಅಭ್ಯರ್ಥಿಯೊಬ್ಬ ತಿಳಿಸಿದರು.
ಏಕೆ ವಿಳಂಬ : ಕಳೆದ ವರ್ಷ ನಕಲಿ ಸಹಿ ಬಳಸಿ ಹಣದಾಸೆಗಾಗಿ ಕೆಲ ಪ್ರಭಾರ ಕುಲಪತಿಗಳ ಕುಮ್ಮಕ್ಕಿನಿಂದ ವಿದ್ಯಾರ್ಥಿಗಳಿಗೆ ನಕಲಿ ಘಟಿಕೋತ್ಸವ ಪ್ರಮಾಣ ಪತ್ರ ವಿತರಿಸಿದ್ದು, ರಾಜ್ಯಮಟ್ಟದಲ್ಲಿ ಚರ್ಚೆಯಾಗಿತ್ತು. ಈ ಪ್ರಕರಣ ಸಂಬಂಧ ನಿ.ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂಬುದಾಗಿ ವಿವಿ ಸಿಂಡಿಕೇಟ್ ಸದಸ್ಯರು ಒತ್ತಾಯಿಸಿದ್ದರು. ಆದ್ದರಿಂದ, ನ್ಯಾಯಾಧೀಶರು ತನಿಖೆ ನಡೆಸಿ ವರದಿ ಸಲ್ಲಿಸಿದ್ದು, ಈವರೆಗೆ ಕೆಲವರ ಮೇಲೆ ಪ್ರಕರಣ ದಾಖಲಿಸಿದ್ದು ಬಿಟ್ಟರೆ, ಕ್ರಮ ಜರುಗಿಸಿಲ್ಲ. ಕೆಲ ಹೊರ ಗುತ್ತಿಗೆ ಸಿಬ್ಬಂದಿಯನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.
ಸದ್ಯ, ಘಟಿಕೋತ್ಸವ ಪ್ರಮಾಣ ಪತ್ರ ವಿತರಣೆ ವಿಭಾಗದಲ್ಲಿ ಹೆಚ್ಚಿನ ಸಿಬ್ಬಂದಿ ಹೊರ ಗುತ್ತಿಗೆ ನೌಕರರಾಗಿದ್ದಾರೆ. ತಿಂಗಳಿಗೊಮ್ಮೆ ಈ ವಿಭಾಗದಲ್ಲಿ ಸಿಬ್ಬಂದಿ ಬದಲಾವಣೆಯಾಗುವುದರಿಂದ ನಿಗದಿತ ವೇಳೆಗೆ ಘಟಿಕೋತ್ಸವ ಪ್ರಮಾಣಪತ್ರ ವಿತರಣೆಯಲ್ಲಿ ನಿರ್ಲಕ್ಷೃ ತೋರುತ್ತಿದ್ದಾರೆ. ಅರ್ಜಿ ಸಲ್ಲಿಕೆಯಾದ ಮೂವತ್ತು ದಿನಗೊಳಗೆ ಪ್ರಮಾಣ ಪತ್ರ ವಿದ್ಯಾರ್ಥಿಗೆ ತಲುಪಬೇಕು. ಆದರೆ, ಕೆಲವರಿಗೆ ಆರೇಳು ತಿಂಗಳು ಕಳೆದರೂ ಪ್ರಮಾಣಪತ್ರ ಬಂದಿಲ್ಲ. ವಿದ್ಯಾರ್ಥಿಗಳು ವಿವಿಗೆ ಭೇಟಿ ನೀಡಿ ಕೇಳಿದರೆ, ಆ ವೇಳೆ ನಾನಿಲ್ಲ, ಈಗ ಹೊಸದಾಗಿ ಅರ್ಜಿ ಸಲ್ಲಿಸಿ ಎಂಬುದಾಗಿ ಹೇಳುತ್ತಿದ್ದಾರೆ. ಅಲ್ಲದೆ, ಕೆಲ ಸಿಬ್ಬಂದಿ ಪಾವತಿ ಶುಲ್ಕಕ್ಕಿಂತ ಹೆಚ್ಚಿನ ಹಣ ಪಡೆದು ಆ ವಿದ್ಯಾರ್ಥಿ ಬದಲಾಗಿ ಬೇರೆಯವರಿಗೆ ನೀಡುತ್ತಿದ್ದಾರೆ ಎಂದು ಹೊಸಪೇಟೆಯ ಬಿ.ಇಡಿ.ಕಾಲೇಜಿನ ಆಡಳಿತ ಸಿಬ್ಬಂದಿ ಆರೋಪಿಸಿದರು.
ಇದಲ್ಲದೇ, ಪ್ರತಿಯೊಂದು ವಿದ್ಯಾರ್ಥಿಗೆ ಅಂಕಪಟ್ಟಿ ಹಾಗೂ ದಾಖಲೆಗಳನ್ನು ತಲುಪಿಸುವುದು ಆಯಾ ಕಾಲೇಜಿನ ಜವಾಬ್ದಾರಿಯಾಗಿದೆ. ಘಟಿಕೋತ್ಸವ ಪ್ರಮಾಣಪತ್ರ ಪ್ರತಿಯೊಬ್ಬ ವಿದ್ಯಾರ್ಥಿಗೆ ತಲುಪಿಸುವುದು ವಿವಿಯ ಹೊಣೆ. ಕೆಲ ವರ್ಷಗಳಿಂದ ಪ್ರಮಾಣಪತ್ರ ಪಡೆಯದೆ ವಿವಿಯಲ್ಲಿ ಬಿಟ್ಟಿದ್ದ ವಿದ್ಯಾರ್ಥಿಗಳು ಪ್ರಮಾಣಪತ್ರ ಪಡೆಯಲು ಸದ್ಯ ಹರಸಾಹಸ ಪಡೆಯುತ್ತಿದ್ದಾರೆ. ಒಟ್ಟಾರೆ, ಏನೇ ಇರಲಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಸಲುವಾಗಿ ತ್ವರಿತಗತಿಯಲ್ಲಿ ವಿದ್ಯಾರ್ಥಿಗಳಿಗೆ ತಲುಪಲಿ ಎಂಬುದು ಒತ್ತಾಯವಾಗಿದೆ.
"

ಕೋಟ್... ವಿವಿಯ ವ್ಯಾಪ್ತಿಯ ಆಯಾ ಕಾಲೇಜುಗಳಿಗೆ ಸಂಬಂಧಿಸಿದ ಘಟಿಕೋತ್ಸವ ಪ್ರಮಾಣ ಪತ್ರ ವಿತರಿಸಲಾಗಿದೆ. ಯಾರಿಗೆ ವಿತರಣೆಯಾಗಿಲ್ಲ ಎಂಬುದು ಗಮನಕ್ಕೆ ತಂದರೆ ಕೂಡಲೇ ವಿತರಿಸಲು ಕ್ರಮವಹಿಸಲಾಗುವುದು.- ಪ್ರೊ.ಎಂ.ಮುನಿರಾಜು, ಕುಲಪತಿ, ವಿಎಸ್‌ಕೆ, ವಿವಿ, ಬಳ್ಳಾರಿ.