ಬಳ್ಳಾರಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭೂ ಒಡೆತನ ಯೋಜನೆಯೂ, ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸಮರ್ಪಕವಾಗಿ ಜಾರಿಯಾಗದೆ ಇರುವುದಕ್ಕೆ ಜಿಲ್ಲಾಧಿಕಾರಿಗಳ ನಿರ್ಲಕ್ಷವೇ ಕಾರಣವಾಗಿದೆ ಎಂದು ಕರ್ನಾಟಕ ಚಲುವಾದಿ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಸಿ.ಆನಂದ ಕುಮಾರ್ ಆರೋಪಿಸಿದರು.
ನಗರದ ಡಿಸಿ ಕಚೇರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭೂ ಒಡೆತನ ಯೋಜನೆ ಅನುಷ್ಠಾನ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಈ ಯೋಜನೆಯ ಪ್ರಯೋಜನ ಸಿಗದೆ ವಿಳಂಬವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಈ ಯೋಜನೆಯಡಿ ರಚಿಸಬೇಕಾದ ಭೂ ದರ ನಿಗದಿ ಸಮಿತಿಯನ್ನು ಇನ್ನೂ ರಚಸದಿರುವುದರಿಂದ ಕರ್ನಾಟಕ ಆದಿಜಾಂಬವ ಅಭಿವೃದ್ಧಿ, ಡಾ. ಬಿ.ಆರ್. ಅಂಬೇಡ್ಕರ್, ಬೋವಿ ಅಭಿವೃದ್ಧಿ, ತಾಂಡ ಅಭಿವೃದ್ಧಿ, ಅಲೆಮಾರಿ ಅಭಿವೃದ್ಧಿ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಗಳಡಿ ಬರುವ ಬಡ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಎಂದರು.
2025ರ ಡಿ.4ರಂದು ಸಲ್ಲಿಸಲಾದ ತಕರಾರು ಅರ್ಜಿಗಳನ್ನು ನೆಪವನ್ನಾಗಿ ಮಾಡಿಕೊಂಡು ಯೋಜನೆ ಜಾರಿಗೆ ವಿಳಂಬ ಮಾಡುತ್ತಿರುವುದು ಖಂಡನೀಯ. ಇಂತಹ ಅರ್ಜಿಗಳನ್ನು ಮುಂದಿಟ್ಟುಕೊಂಡು ಯೋಜನೆಯನ್ನು ಸ್ಥಗಿತಗೊಳಿಸಿದರೆ ತಳ ಸಮುದಾಯಗಳಿಗೆ ಮತ್ತಷ್ಟು ಅನ್ಯಾಯವಾಗುವುದಲ್ಲದೆ, ಅವರ ಬದುಕಿನ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದರು.
ಈ ಕುರಿತಂತೆ ಮೂರು ದಿನಗಳೊಳಗೆ ಭೂ ದರ ನಿಗದಿ ಸಭೆಯನ್ನು ಕರೆದು ಎಲ್ಲಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇಲ್ಲವಾದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು. ವಕೀಲರಾದ ಈಶ್ವರಪ್ಪ, ಬಾಲಾಜಿ, ಪದಾಧಿಕಾರಿಗಳಾದ ತುಳಿಸಿ, ಜಯಲಕ್ಷ್ಮೀ, ಜಿ. ದಿವಾಕರ್‌ಬಾಬು, ವೀರೇಶ ಇದ್ದರು.