ಬಳ್ಳಾರಿಯ ಕನಕ ದುರ್ಗಮ್ಮ ದೇವಸ್ಥಾನ ಮುಂಭಾಗದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬದ ಹಿನ್ನೆಲೆ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೇಯರ್ ಪಿ.ಗಾದೆಪ್ಪ, ಬುಡಾ ಅಧ್ಯಕ್ಷ ಆಂಜನೇಯಲು, ಸಂಸದ ಈ.ತುಕಾರಾಮ್, ಪಾಲಿಕೆ ಸದಸ್ಯ ಕುಬೇರ ಇತರರಿದ್ದರು.
- ದುರ್ಗಮ್ಮ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ
- ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ
ಬಳ್ಳಾರಿ : ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜನ್ಮದಿನದ ಅಂಗವಾಗಿ ನಗರದ ಕನಕ ದುರ್ಗಮ್ಮ ದೇವಸ್ಥಾನ ಮುಂಭಾಗದಲ್ಲಿ ಸಂಸದ ಇ. ತುಕಾರಾಮ್, ಬುಡಾ ಅಧ್ಯಕ್ಷ ಜೆ.ಎಸ್. ಆಂಜನೇಯಲು, ಮೇಯರ್ ಪಿ. ಗಾದೆಪ್ಪ ಹಾಗೂ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಹಾಗೂ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ 64 ವರ್ಷ ಪೂರೈಸಿ 65ನೇ ವಸಂತಕ್ಕೆ ಕಾಲಿಟ್ಟ ಹಿನ್ನೆಲೆ, 65 ಕೆಜಿಯ ಬೃಹತ್ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಇದೇ ಸಂದರ್ಭದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಬಳಿಕ ಸಂಸದ ಇ. ತುಕಾರಾಮ್ ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬದ ನಿಮಿತ್ತ ವಿಶೇಷ ಪೂಜೆ ಸಲ್ಲಿಸಿ, ಅವರ ಇಷ್ಟಾರ್ಥಗಳು ಈಡೇರಲಿ ಎಂಬುದಾಗಿ ಪ್ರಾರ್ಥಿಸಿದ್ದೇವೆ. ಕೇರಳ ಮಾದರಿಯಲ್ಲಿ ಹೈಕಮಾಂಡ್ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಲಿದೆ. ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಹೊಸ ತಂಗಾಳಿ ಬೀಸಲಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಬುಡಾ ಅಧ್ಯಕ್ಷ ಜೆ.ಎಸ್. ಆಂಜನೇಯಲು ಮಾತನಾಡಿ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ನಾವು ದೇವರಿಗೆ ಹರಕೆ ಕಟ್ಟಿಕೊಂಡಿದ್ದೇವೆ. ಆ ಹರಕೆ ಏನು ಎಂಬುದು ದೇವರಿಗೆ ಮತ್ತು ನಮಗೆ ಮಾತ್ರ ಗೊತ್ತು. ಶೀಘ್ರದಲ್ಲೇ ನಮ್ಮ ಹರಕೆ ಈಡೇರಲಿದ್ದು, ಆ ಬಳಿಕ ದೇವಸ್ಥಾನಕ್ಕೆ ಮುಡುಪು ಸಲ್ಲಿಸುತ್ತೇವೆ ಎಂದರು.