ಕಂಪ್ಲಿಯಲ್ಲಿ ತಾಳೆ ತೊಗಟೆ ತೆಗೆಯುತ್ತಿರುವ ಮಾರಾಟಗಾರ. 
ಬಳ್ಳಾರಿ

ಜನಸಾಮಾನ್ಯರ ಕೈಗೆಟುಕದ ತಾಳೆಹಣ್ಣು

ಕಂಪ್ಲಿ: ದಿನೇ ದಿನೆ ಬಿಸಿಲಿನ ತಾಪ ಏರುತ್ತಿದ್ದು, ಮಳೆ ಸುರಿದರೂ ಸೆಖೆ ಕಡಿಮೆಯಾಗುತ್ತಿಲ್ಲ. ಸೆಖೆಯಿಂದ ಪಾರಾಗಲು ಪಟ್ಟಣದ ಜನರು ತಾಳೆಹಣ್ಣು ಸೇವನೆ ಮೊರೆ ಹೋಗಿದ್ದಾರೆ. ಆದರೆ, ತಾಳೆಹಣ್ಣು ದರ ಹೆಚ್ಚಿರುವುದು ಗ್ರಾಹಕರಲ್ಲಿ ಕಸಿವಿಸಿ ಸೃಷ್ಟಿಸಿದೆ.
ತಾಳೆಹಣ್ಣು ರಾಸಾಯನಿಕ ಮುಕ್ತವಾಗಿದ್ದು ಸೇವನೆಯಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮ ಕೂಡ ಇರುವುದಿಲ್ಲ. ರಾಮಸಾಗರ, ಬುಕ್ಕಸಾಗರ ಸೇರಿದಂತೆ ತುಂಗಭದ್ರಾ ನದಿಪಾತ್ರದಲ್ಲಿ ನೈಸರ್ಗಿಕವಾಗಿ ದೊರಕುತ್ತದೆ. ಕೆಲವು ವರ್ಷ 10 ರೂಪಾಯಿಗೊಂದರಂತೆ ಮಾರಾಟವಾಗುತ್ತಿದ್ದ ತಾಳೆಹಣ್ಣು ಕಳೆದ ವರ್ಷ 15ರಿಂದ 20 ರೂಪಾಯಿಗೆ ಮಾರಾಟವಾಗಿತ್ತು. ಈಗ ಮೂವತ್ತು ರೂಪಾಯಿಗೊಂದು ಐವತ್ತು ರೂಪಾಯಿಗೆ ಎರಡರಂತೆ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಮಾರಾಟಗಾರರು ತಾಳ್ಮೆಯಿಂದ ಗ್ರಾಹಕರನ್ನು ಕಾಯುವಂತಾಗಿದೆ.
ತಾಳೆಹಣ್ಣು ಉಚಿತವಾಗಿ ದೊರಕಿದರೂ ವಿಷಜಂತುಗಳ ಉಪಟಳ ಎದುರಿಸಿ ಸಂಗ್ರಹಿಸುವ ಕೌಶಲ ಮತ್ತು ನಿಪುಣತೆ ಅಗತ್ಯವಿದೆ. ಮರ ಏರಿ ತಾಳೆ ಸಂಗ್ರಹಿಸಿದ ನಂತರ ಆಟೋ, ಬಂಡಿ ಬಾಡಿಗೆ, ಸ್ಥಳದ ಜಕಾತಿ ಕಳೆದು ನಮಗೆ ದಿನಕ್ಕೆ 200ರಿಂದ 300 ರೂ. ದೊರಕಲಿದೆ ಎಂದು ತಾಳೆ ಮಾರಾಟಗಾರ ಬುಕ್ಕಸಾಗರದ ಪ್ರಭು, ರಾಜಾ, ಮೈಲಾರಿ, ನಾಗರಾಜ, ಮಹೇಶ್, ರಾಜೇಶ್ ಹೇಳಿದರು.