ಕೂಡ್ಲಿಗಿ ಪಟ್ಟಣದ ಮಹಾತ್ಮ ಗಾಂಧಿ ರಸ್ತೆಯಲ್ಲಿ ದೀಪಗಳಿಲ್ಲದೆ ಕತ್ತಲು ಆವರಿಸಿದ್ದು, ಕಾಮಗಾರಿ ವಿಳಂಬದಿಂದ ಸಾರ್ವಜನಿಕರು ಪರದಾಡುವಂತಾಗಿದೆ. 
ಬಳ್ಳಾರಿ

ಕೂಡ್ಲಿಗಿ ಮುಖ್ಯರಸ್ತೆಗೆ ಆವರಿಸಿದ ಕತ್ತಲು

ಪ್ರಮುಖ ಮುಖ್ಯಾಂಶಗಳು

  • ಆಮೆಗತಿ
  • ಬೀದಿ ದೀಪ
  • ಕಾಮಗಾರಿ
ಕೂಡ್ಲಿಗಿ: ಪಟ್ಟಣದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಕಳೆದ ಆರು ತಿಂಗಳಿನಿಂದ ನಡೆಯುತ್ತಿರುವ ಬೀದಿದೀಪ ಅಳವಡಿಕೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರು ನಿತ್ಯ ಕತ್ತಲಲ್ಲಿ ಸಂಚರಿಸುವಂತಾಗಿದೆ.
ಬೆಂಗಳೂರಿನ ಪ್ರಾಮ್ ಸೀ ಕಂಪನಿಯಿಂದ ಅಂದಾಜು ಎರಡು ಕೋಟಿ ರೂ. ಅನುದಾನದಲ್ಲಿ ಪಟ್ಟಣದ ಕೊಟ್ಟೂರು ರಸ್ತೆಯಿಂದ
ಬಸವೇಶ್ವರ ವೃತ್ತದವರೆಗೆ ಸುಮಾರು ಮೂರು ಕಿ.ಮೀ ಉದ್ದದ ರಸ್ತೆ ವಿಭಜಕಗಳ ಮಧ್ಯೆ ವಿದ್ಯುತ್ ಕಂಬ ಹಾಗೂ ದೀಪಗಳನ್ನು ಅಳವಡಿಸುವ ಕಾಮಗಾರಿ ಆರು ತಿಂಗಳ ಹಿಂದೆಯೇ ಆರಂಭವಾಗಿತ್ತು. ಆದರೆ, ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ಮತ್ತು ಪರ್ಯಾಯ ದೀಪಗಳ ವ್ಯವಸ್ಥೆಯೂ ಇಲ್ಲದ ಕಾರಣ ಇಡೀ ರಸ್ತೆ ಕತ್ತಲೆಯಲ್ಲಿ ಮುಳುಗಿದೆ.
ಸಂಜೆಯಾಗುತ್ತಿದ್ದಂತೆ ಜನನಿಬಿಡ ರಸ್ತೆಯಲ್ಲಿ ಪಾದಚಾರಿಗಳು ಪರದಾಡುವ ದುಃಸ್ಥಿತಿ ಎದುರಾಗಿದೆ. ನಿವೃತ್ತ ಅಧಿಕಾರಿಗಳು ಹಾಗೂ ಮಹಿಳೆಯರು ನಿತ್ಯ ಸಂಜೆ ಇದೇ ರಸ್ತೆಯಲ್ಲಿ ವಾಯು ವಿಹಾರಕ್ಕೆ ತೆರಳುತ್ತಿದ್ದು, ಕತ್ತಲೆಯಿಂದಾಗಿ ದಾರಿ ಕಾಣದೆ ತೊಂದರೆ ಅನುಭವಿಸುತ್ತಿದ್ದಾರೆ. ಎದುರಿಗೆ ವಾಹನಗಳು ಬಂದಾಗ ಅವುಗಳ ಹೈಬೀಮ್ ಬೆಳಕಿನಿಂದಾಗಿ ಪಾದಚಾರಿಗಳ ಕಣ್ಣು ಮಂಜಾಗಿ ದಾರಿ ಕಾಣದಂತಾಗುತ್ತದೆ. ಇದರಿಂದ ಅನೇಕರು ನಿಯಂತ್ರಣ ಬಿದ್ದ ಉದಾಹರಣೆಗಳಿವೆ. ವಾಹನ ಸವಾರರು ಸಹ ಅಪಘಾತಕ್ಕೀಡಾಗುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಇಲಾಖೆ ಮಾತ್ರ ಕಣ್ಣುಮುಚ್ಚಿ ಕುಳಿತಿದೆ ಎಂದು ನಿವೃತ್ತ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಕಂಬಗಳ ಅಳವಡಿಕೆಗಾಗಿ ರಸ್ತೆ ವಿಭಜಕದ ಮಧ್ಯೆ ರಸ್ತೆಯನ್ನು ಅಗೆಯಲಾಗಿದ್ದು, ಗುಂಡಿಗಳನ್ನು ಮುಚ್ಚಲು ಅಲ್ಲಲ್ಲಿ ಗುಂಪಾಗಿ ಎಂ-ಸ್ಯಾಂಡ್ (ಮರಳು) ಸುರಿಯಲಾಗಿದೆ. ಇದರಿಂದ ಬೈಕ್ ಸವಾರರು ಜಾರಿ ಬೀಳುವ ಅಪಾಯವಿದ್ದು, ವಾಹನಗಳು ಸಂಚರಿಸುವಾಗ ಏಳುವ ಧೂಳು ಸಾರ್ವಜನಿಕರ ಕಣ್ಣಿಗೆ ಬಿದ್ದು ಕಿರಿಕಿರಿ ಉಂಟುಮಾಡುತ್ತಿದೆ. ಹಗಲು ಹೊತ್ತಿನಲ್ಲಿ ರಸ್ತೆಯುದ್ದಕ್ಕೂ ಧೂಳು ಆವರಿಸುತ್ತಿರುವುದರಿಂದ ಮುಕ್ತವಾಗಿ ಉಸಿರಾಡುವುದೇ ಕಷ್ಟಕರವಾಗಿದೆ. ಕೂಡಲೇ ರಸ್ತೆಯಲ್ಲಿರುವ ಮರಳನ್ನು ವಿಲೇವಾರಿ ಮಾಡಿ, ದೀಪಗಳನ್ನು ಬೆಳಗಿಸಲು ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
"

ಕಳೆದ ಆರು ತಿಂಗಳಿನಿಂದ ಪ್ರಮುಖ ರಸ್ತೆಯಲ್ಲಿ ದೀಪಗಳಿಲ್ಲದೆ ವಯೋವೃದ್ಧರ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ. ರಸ್ತೆಯಲ್ಲಿ ಸುರಿಯಲಾಗಿರುವ ಎಂ-ಸ್ಯಾಂಡ್‌ನಿಂದಾಗಿ ಧೂಳು ಇಡೀ ರಸ್ತೆಯನ್ನೇ ಆವರಿಸುತ್ತಿದ್ದು, ಉಸಿರಾಟಕ್ಕೂ ತೊಂದರೆಯಾಗುತ್ತಿದೆ.

— ಎಚ್. ವೀರಣ್ಣ, ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಉಪಾಧ್ಯಕ್ಷ, ಕೂಡ್ಲಿಗಿ


"

ಪ್ರಾಮ್ ಸೀ ಕಂಪನಿಯವರು ಈ ಕಾಮಗಾರಿ ನಡೆಸುತ್ತಿದ್ದು, ಫೆಬ್ರವರಿಯಲ್ಲಿ ಕೆಲಸ ಆರಂಭವಾಗಿದೆ. ಲೋಕೋಪಯೋಗಿ ಇಲಾಖೆಯು ಕೇವಲ ಉಸ್ತುವಾರಿ ವಹಿಸಿದೆ. ಶೀಘ್ರದಲ್ಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಹಾಗೂ ರಸ್ತೆಯಲ್ಲಿರುವ ಎಂ-ಸ್ಯಾಂಡ್ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

— ಕೆ. ನಾಗನಗೌಡ, ಎಇಇ, ಲೋಕೋಪಯೋಗಿ ಇಲಾಖೆ, ಕೂಡ್ಲಿಗಿ