ಹೂವಿನಹಡಗಲಿಯಲ್ಲಿ ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ ಅವರ ಸ್ಮಾರಕದ ಬಳಿ ಆಯೋಜಿಸಿದ್ದ ಎಂ.ಪಿ.ಪ್ರಕಾಶ ಹಾಗೂ ರುದ್ರಾಂಬಾ ಎಂ.ಪಿ.ಪ್ರಕಾಶ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶಾಖಾ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಮಾತನಾಡಿದರು. ಶ್ರೀ ರಾಮದೇವಸ್ಥಾನದ ಧರ್ಮಕರ್ತ ಡಾ.ರಾಕೇಶಯ್ಯ ರಾಮಸ್ವಾಮಿ, ಹಿರೇಮಲ್ಲಕೇರಿ ಮಠದ ಚನ್ನಬಸವ ಸ್ವಾಮೀಜಿ ಇದ್ದರು.
ಹೂವಿನಹಡಗಲಿ: ನಾವು ಕಾಲವಾದಮೇಲೆ ಜನರ ನೆನಪಿನಲ್ಲಿ ಉಳಿಯಲು ಆಸ್ತಿ ಮಾಡಬೇಕಾಗಿಲ್ಲ. ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಶಾಖಾ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ ಅವರ ಸ್ಮಾರಕದ ಬಳಿ ಭಾನುವಾರ ಆಯೋಜಿಸಿದ್ದ ಎಂ.ಪಿ.ಪ್ರಕಾಶ ಹಾಗೂ ರುದ್ರಾಂಬಾ ಎಂ.ಪಿ.ಪ್ರಕಾಶ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಭಾಗದಲ್ಲಿ ಉತ್ಸವಗಳು ಜರುಗಬೇಕು ಎಂಬ ನಿಟ್ಟಿನಲ್ಲಿ ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ಪ್ರಾರಂಭಿಸಿದ ಕೀರ್ತಿ ಎಂ.ಪಿ.ಪ್ರಕಾಶ ಅವರಿಗೆ ಸಲ್ಲುತ್ತದೆ. ಹಿಂದುಳಿದ ತಾಲೂಕನ್ನು ಸಾಮಾಜಿಕ, ಸಾಂಸ್ಕೃತಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವ ಮೂಲಕ ರಾಜ್ಯಕ್ಕೆ ಹೂವಿನಹಡಗಲಿಯನ್ನು ಪರಿಚಯಿಸಿದರು ಎಂದರು.
ಶ್ರೀ ರಾಮದೇವಸ್ಥಾನದ ಧರ್ಮಕರ್ತ ಡಾ.ರಾಕೇಶಯ್ಯ ರಾಮಸ್ವಾಮಿ ಮಾತನಾಡಿ, ತಾಲೂಕು ಹಿಂದುಳಿದ ಹಣೆಪಟ್ಟಿಯಿಂದ ಹೊರಬರಬೇಕಾದರೆ ಎಲ್ಲರೂ ಶಿಕ್ಷಣವಂತರಾಗಬೇಕು. ಎಂ.ಪಿ.ಪ್ರಕಾಶ ಅವರಂತೆ ಅವರ ಕುಟುಂಬ ವರ್ಗವೂ ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಯುವಕರಿಗೆ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.
ಹಿರೇಮಲ್ಲಕೇರಿ ಮಠದ ಚನ್ನಬಸವ ಸ್ವಾಮೀಜಿ, ಡಾ.ಮಹಾಂತೇಶ ಚರಂತಿಮಠ, ರಂಗಭಾರತಿ ಕಾರ್ಯಾಧ್ಯಕ್ಷ ಎಂ.ಪಿ.ಸುಮಾ ವಿಜಯ್, ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾಮಹಾಂತೇಶ, ನಿವೃತ್ತ ಪ್ರಾಚಾರ್ಯ ಶಾಂತಮೂರ್ತಿ ಕುಲಕರ್ಣಿ, ಪ್ರಮುಖರಾದ ಜಯಣ್ಣ, ಕೊಟ್ರಸ್ವಾಮಿ, ಬಸಯ್ಯ, ಬಸವರಾಜ, ಹನುಮಂತ, ಸಂತೋಷ್ ಜೈನ್ ಇತರರಿದ್ದರು.