ನೂತನ ಅಜೀವ ಸದಸ್ಯತ್ವ ಕಲ್ಪಿಸಿ 
ಬಳ್ಳಾರಿ

ನೂತನ ಅಜೀವ ಸದಸ್ಯತ್ವ ಕಲ್ಪಿಸಿ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಸದಸ್ಯತ್ವ
ಬಳ್ಳಾರಿ : ಲಿಂಗಾಯತ ಸಮಾಜದವರಾಗಿದ್ದು, ಬೈಲಾದ ನೀತಿ ನಿಯಮಾವಳಿಗಳಂತೆ ಜಿಲ್ಲೆಯ ವೀ.ವಿ. ಸಂಘದ ಅಜೀವ ಸದಸ್ಯತ್ವ ನೀಡಬೇಕು ಎಂದು ಬಳ್ಳಾರಿ ವೀ.ವಿ. ಸಂಘದ ಅಜೀವ ಸದಸ್ಯತ್ವ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಎಸ್.ಎಂ.ಕಾಶಿನಾಥಯ್ಯ ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಎಲ್ಲರಿಗೂ ಹಲವು ಬಾರಿ ಮನವಿ ಸಲ್ಲಿಸಿದರೂ, ಕೇವಲ ಆಶ್ವಾಸನೆ ನೀಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಪ್ರಸ್ತುತ ಈಗಿರುವ ಸದಸ್ಯತ್ವ ಶುಲ್ಕ ಐವತ್ತು ಸಾವಿರ ರೂ. ಪಾವತಿಗೆ ಸಿದ್ಧರಿದ್ದೇವೆ. ಆ ಹಣದಿಂದ ಸಂಘದಲ್ಲಿನ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಆದರೆ, ಕೆಲ ಪಟ್ಟಬದ್ಧ ಹಿತಾಸಕ್ತಿಗಳು ಹೊಸದಾಗಿ ಸದಸ್ಯತ್ವ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಕಳೆದ ವೀರಶೈವ ಸಂಘದ ಚುನಾವಣೆಯಲ್ಲಿ 2500 ಅಜೀವ ಸದಸ್ಯರಿದ್ದರು. ಇದರಲ್ಲಿ ಈಗಾಗಲೇ 400ಕ್ಕೂ ಅಧಿಕ ಸದಸ್ಯರು ನಿಧನರಾಗಿದ್ದಾರೆ. ಆದ್ದರಿಂದ, ಹೊಸದಾಗಿ ಸಮಾಜದ ಯುವಕರಿಗೆ ಸಂಘದ ಸದಸ್ಯತ್ವ ನೀಡಬೇಕು ಎಂಬುದಾಗಿ ಸಂಘದ ಹಾಲಿ ಅಧ್ಯಕ್ಷರಿಗೆ ಮನವಿ ಮಾಡಲಾಗುವುದು ಎಂದರು. ಪದಾಧಿಕಾರಿಗಳಾದ ಕಿರಣ್ ಶಂಕರಿ, ಓಂಕಾರೇಶ್ವರ, ರವಿಕಾಂತ್, ಮಧುಚನ್ನ ಶಾಸ್ತ್ರಿ ಇದ್ದರು.
===