ನೂತನ ಸೇತುವೆಯ ನೀಲಿನಕ್ಷೆ 
ಬಳ್ಳಾರಿ

ಮುಳುಗದ ಸೇತುವೆ ನಿರ್ಮಾಣಕ್ಕೆ ಕೌಂಟ್‌ಡೌನ್

ಬಂಗಿ ದೊಡ್ಡಮಂಜುನಾಥ
ಕಂಪ್ಲಿ: ಬಹು ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಕಂಪ್ಲಿಯ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣಕ್ಕೆ ತಾಂತ್ರಿಕ ಒಪ್ಪಿಗೆ ಪಡೆವ ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದೆ.
ಇದೇ ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ಇಆರ್‌ಸಿ (ಎಸ್ಟಿಮೇಷನ್ ರಿವ್ಯೆ ಕಮಿಟಿ) ಸಭೆಯಲ್ಲಿ ಅಂದಾಜು ಪಟ್ಟಿ ಮಂಡನೆಯಾಗಲಿದೆ. ಸಭೆಯಲ್ಲಿ ತಾಂತ್ರಿಕ ಅನುಮೋದನೆ ದೊರೆತ ತಕ್ಷಣ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ.
1959ರ ಸುಮಾರಿಗೆ ನಿರ್ಮಾಣಗೊಂಡಿದ್ದ ಈ ಸೇತುವೆಯೀಗ ಶಿಥಿಲಗೊಂಡಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದು ಬಂದಾಗ ಸೇತುವೆ ಸಂಪೂರ್ಣ ಮುಳುಗಿ ಸಂಪರ್ಕ ಕಡಿತಗೊಳ್ಳುತ್ತದೆ. ಕೆಲವೊಮ್ಮೆ 30-40 ದಿನಗಳ ಕಾಲ ಸಂಪರ್ಕ ಸ್ಥಗಿತಗೊಂಡಿದ್ದ ಉದಾಹರಣೆ ಗಳು ಇವೆ. ಇದರಿಂದ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು, ರೈತರು ತೀವ್ರ ತೊಂದರೆ ಅನುಭವಿಸಿದ್ದಾರೆ. ಸುತ್ತಿ ಬಳಸಿ ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ.
ಕಳೆದ ಎರಡು ದಶಕಗಳಿಂದ ಪಟ್ಟಣಿಗರು, ಪ್ರಗತಿಪರ ಸಂಘಟನೆಗಳು ಹೊಸ ಸೇತುವೆಗೆ ನಿರಂತರ ಒತ್ತಾಯಿಸುತ್ತಾ ಬಂದಿದ್ದವು.

ಹೇಗಿರಲಿದೆ ನೂತನ ಬ್ರಿಡ್ಜ್ ?

ನೂತನ ಸೇತುವೆ ಬೆನಕನ ಕಾಲುವೆ ಬಳಿಯಿಂದ ಚಿಕ್ಕಜಂತಕಲ್‌ಗೆ ನದಿಗೆ ಅಡ್ಡಲಾಗಿ ನಿರ್ಮಾಣಗೊಳ್ಳಲಿದೆ. ಈಗಿರುವ ಸೇತುವೆ ಮಟ್ಟದಿಂದ 7.5 ಮೀ. ಎತ್ತರದಲ್ಲಿ ನಿರ್ಮಾಣ ಆಗುವುದರಿಂದ ನೆರೆ ಬಂದಾಗ ಮುಳುಗಡೆ ಸಮಸ್ಯೆ ತಪ್ಪಲಿದೆ. ಸೇತುವೆ 700 ಮೀಟರ್ ಉದ್ದ ಹಾಗೂ 11 ಮೀಟರ್ ಅಗಲ ಇರಲಿದೆ. ಎರಡೂ ಕಡೆ 1.5 ಮೀಟರ್‌ನಷ್ಟು ಪಾದಚಾರಿ ರಸ್ತೆ ಸೇರಿ ಒಟ್ಟಾರೆ 14 ಮೀಟರ್ ಅಗಲ ಇರಲಿದೆ. ಗಂಗಾವತಿ ಕಡೆ 415 ಮೀಟರ್ ಹಾಗೂ ಕಂಪ್ಲಿ ಕಡೆ 258 ಮೀಟರ್‌ನಷ್ಟು ಅಪ್ರೋಚ್ ರಸ್ತೆ ನಿರ್ಮಾಣವಾಗಲಿದೆ. ಅಪ್ರೋಚ್ ರಸ್ತೆ ಏಳು ಮೀಟರ್ ಡಾಂಬರ್ ಹೊಂದಿದ್ದು, ಎರಡೂ ಬದಿ ತಲಾ 1.5 ಮೀಟರ್ ಪೇವರ್ಸ್ ಹಾಗೂ ತಲಾ ಒಂದು ಮೀಟರ್ ಶೋಲ್ಡರ್ಸ್ ಇರಲಿದೆ. ಗರ್ಡರ್ ವಿತ್ ಡೆಕ್ ಸ್ಲ್ಯಾಬ್ ಮಾದರಿಯಲ್ಲಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಲಿದೆ.

ಸ್ಥಳ ಆಯ್ಕೆ ಹಿಂದಿನ ಕಾರಣ

ಬೆನಕನ ಕಾಲುವೆ ಬಳಿ ಅಥವಾ ಈಗಿರುವ ಸೇತುವೆ ಬಲ ಭಾಗದಲ್ಲಿ ನದಿಯ ಅಗಲ ಕಡಿಮೆ ಇರುವುದರಿಂದ ಈ ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಇಲ್ಲಿ ನದಿಯ ಅಗಲ 596 ಮೀಟರ್ ಮಾತ್ರ. ಭೂಸ್ವಾಧೀನ ಪ್ರಮಾಣ ಕಡಿಮೆ ಇದೆ. ಜೊತೆಗೆ ಮಣ್ಣು ಪರೀಕ್ಷೆಯಲ್ಲಿ ಈ ಸ್ಥಳ ಸೇತುವೆ ನಿರ್ಮಾಣಕ್ಕೆ ಅತ್ಯಂತ ಸೂಕ್ತವಾಗಿದೆ ಎಂಬುದು ಪಿಡಬ್ಲ್ಯುಡಿ ಎಇ ಆನಂದ ಪೆಮ್ಮಾರ್ ಅಭಿಮತ. ಇದಕ್ಕಾಗಿ ಕಂಪ್ಲಿ ಮತ್ತು ಚಿಕ್ಕಜಂತಕಲ್ ಕಡೆಗಳಲ್ಲಿ ತಲಾ ಮೂರು ಎಕರೆಯಂತೆ ಒಟ್ಟು ಆರು ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಿದೆ.

ಸಾಕಾರದ ಹಾದಿಯಲ್ಲಿ ಭರವಸೆ

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ಶ್ರೀರಾಮುಲು ಅವರು ಸೇತುವೆ ನಿರ್ಮಿಸುವ ಭರವಸೆ ನೀಡಿದ್ದರೂ ಅವರ ಅವಧಿಯಲ್ಲಿ ಕಾಮಗಾರಿ ಆರಂಭವಾಗಲಿಲ್ಲ. ಬಳಿಕ ಪಿಡಬ್ಲ್ಯುಡಿ ಸಚಿವ ಸತೀಶ ಜಾರಕಿಹೊಳಿ ಸ್ಥಳ ವೀಕ್ಷಿಸಿ ಹೊಸ ಸೇತುವೆ ನಿರ್ಮಿಸುವ ಭರವಸೆ ನೀಡಿದ್ದರು. ಇದೀಗ ಲೋಕೋಪಯೋಗಿ ಇಲಾಖೆ ಸಚಿವರ ಹಸಿರು ನಿಶಾನೆ ದೊರೆತಿದ್ದು, ಕಾಮಗಾರಿ ಆರಂಭಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಜೆ.ಎನ್. ಗಣೇಶ್ ತಿಳಿಸಿದ್ದಾರೆ.
"

ಬೆನಕನ ಕಾಲುವೆ ಬಳಿಯಲ್ಲಿ ಅಥವಾ ಕಂಪ್ಲಿಯಿಂದ ತೆರಳುವಾಗ ಈಗಿರುವ ಸೇತುವೆಯ ಬಲ ಭಾಗದಲ್ಲಿ ನದಿಯ ಅಗಲ ಕಡಿಮೆ ಇದ್ದುದರಿಂದ ನೂತನ ಸೇತುವೆ ನಿರ್ಮಾಣಕ್ಕೆ ಸ್ಥಳ ಆಯ್ಕೆ ಮಾಡಿದೆ. ಈ ಸ್ಥಳದಲ್ಲಿ ನದಿಯ ಅಗಲ 596 ಮೀಟರ್‌ನಷ್ಟಿದೆ. ಭೂಸ್ವಾಧೀನತೆ ಪ್ರಮಾಣ ಕಡಿಮೆ ಇದೆ. ಮೇಲಾಗಿ ಸೇತುವೆ ನಿರ್ಮಾಣಕ್ಕೆ ಮಣ್ಣು ಪರೀಕ್ಷೆಯಲ್ಲಿ ಸ್ಥಳ ಉತ್ತಮವಾಗಿದೆ. ಅಂದಾಜುಪಟ್ಟಿಯನ್ನು ರಾಜ್ಯಮಟ್ಟದ ತಾಂತ್ರಿಕ ಪರಿಶೀಲನಾ ಸಭೆಯಲ್ಲಿ ಮಂಡಿಸಿ ತಾಂತ್ರಿಕ ಒಪ್ಪಿಗೆ ಪಡೆಯಲಾಗುವುದು.

— ಆನಂದ ಪೆಮ್ಮಾರ್ ಎಇ, ಪಿಡಬ್ಲ್ಯುಡಿ, ಕಂಪ್ಲಿ
"

ಕಂಪ್ಲಿಯ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣ ನನ್ನ ಮಹತ್ತರ ಕನಸಾಗಿದೆ. ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಸಚಿವರ ಹಸಿರು ನಿಶಾನೆ ದೊರಕಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು.

— ಜೆ.ಎನ್.ಗಣೇಶ್ ಶಾಸಕ, ಕಂಪ್ಲಿ.