ಬಳ್ಳಾರಿಯ ಡಿಸಿ ಕಚೇರಿ ಆವರಣದಲ್ಲಿ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ತಹಸೀಲ್ದಾರ್ ವಿಶ್ವಜಿತ್ ಮೆಹ್ತಾ ಅವರಿಗೆ ಮನವಿ ಸಲ್ಲಿಸಲಾಯಿತು. ಕಾರ್ಯದರ್ಶಿ ಎ.ಸ್ವಾಮಿ, ಪದಾಧಿಕಾರಿಗಳಾದ ಎಚ್.ದುರುಗಮ್ಮ, ಭಾರತಿ, ಲಕ್ಷ್ಮೀದೇವಿ, ಹುಲಿಗೆಮ್ಮ, ರುದ್ರಮ್ಮ, ಶೇಖಮ್ಮ, ರಂಗಮ್ಮ, ಗಂಗಮ್ಮ ಇತರರಿದ್ದರು.
- ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ
- ಮದುವೆ ಸಹಾಯ ಧನಕ್ಕೆ ಅರ್ಜಿ
ಬಳ್ಳಾರಿ : ರಾಜ್ಯದಲ್ಲಿ ನಡೆದಿರುವ ವಿಮುಕ್ತ ದೇವದಾಸಿಯರ ಸರ್ವೇ ಅವೈಜ್ಞಾನಿಕವಾಗಿದ್ದು, ಸರಿಪಡಿಸಿ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ, ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಪ್ರತಿಭಟನೆ ನಡೆಯಿತು.
ಸಂಘದ ಜಿಲ್ಲಾ ಕಾರ್ಯದರ್ಶಿ ಎ. ಸ್ವಾಮಿ ಮಾತನಾಡಿ, ಸ್ಥಗಿತಗೊಳಿಸಿರುವ ದೇವದಾಸಿಯರ ಪಿಂಚಣಿ ಹಣ ಕೂಡಲೇ ಬಿಡುಗಡೆ ಮಾಡಬೇಕು. ಪ್ರಸ್ತಕ ಸಾಲಿನ ಬಜೆಟ್‌ನಲ್ಲಿ ಆರು ಸಾವಿರ ರೂ. ಪೆನ್ಷನ್ ಹೆಚ್ಚಿಸಬೇಕು. ಸರ್ಕಾರದಿಂದ ನಡೆದ ವಿಮುಕ್ತ ದೇವದಾಸಿ ಮಹಿಳೆಯರ ವಯೋಮಿತಿ ಹೇರಿ ಸರ್ವೇಯಿಂದ ಹೊರಗೆ ಇಟ್ಟಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು.
ಸರ್ವೇಯಿಂದ ಹೊರ ಉಳಿದ ವಿಮುಕ್ತ ದೇವದಾಸಿ ಮಹಿಳೆಯರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತಾಯಿಯ ದೇವದಾಸಿ ದೃಢೀಕರಣ ಪತ್ರ ನೀಡಬೇಕು. ಎರಡು ಲಕ್ಷ ರೂ. ವರೆಗೆ ಸಹಾಯಧನ ನೀಡಬೇಕು. ಮದುವೆ ಸಹಾಯ ಧನಕ್ಕೆ ಅರ್ಜಿ ಹಾಕಿದ ದೇವದಾಸಿ ಮಕ್ಕಳಿಗೆ ಒಂದು ವರ್ಷದಲ್ಲೇ ಹಣ ಖಾತೆಗೆ ಜಮೆ ಮಾಡಬೇಕು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿದರು.